ADVERTISEMENT

ಮಡಿ ತೊಳೆಯುವವರ ಬೆಳಕಿನ ಬಯಕೆ...

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 6:30 IST
Last Updated 12 ಜನವರಿ 2019, 6:30 IST
ರಟ್ಟೆ ಸೋಲುವವರೆಗೆ ಬಟ್ಟೆ ಒಗೆಯುವ ಕಾಯಕ...ಹುಬ್ಬಳ್ಳಿಯ ಭವಾನಿನಗರದ ಧೋಬಿಘಾಟ್
ರಟ್ಟೆ ಸೋಲುವವರೆಗೆ ಬಟ್ಟೆ ಒಗೆಯುವ ಕಾಯಕ...ಹುಬ್ಬಳ್ಳಿಯ ಭವಾನಿನಗರದ ಧೋಬಿಘಾಟ್   

ಎನ್ನ ಕಾಯವ ಶುದ್ಧ ಮಾಡಿದಾತ ಮಡಿವಾಳ
ಎನ್ನ ಮನವ ನಿರ್ಮಲ ಮಾಡಿದಾತ ಮಡಿವಾಳ
ಎನ್ನಂತರಂಗವ ಬೆಳಗಿದಾತ ಮಡಿವಾಳ
ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ
ಕೂಡಲ ಸಂಗಮದೇವಾ ಎನ್ನ ನಿನಗೆ ಯೋಗ್ಯವ ಮಾಡಿದಾತ ಮಡಿವಾಳ

ಬಟ್ಟೆಗಳನ್ನು ತೊಳೆಯುವುದನ್ನೇ ಕುಲ ಕಸುಬಾಗಿಸಿಕೊಂಡಿರುವ ಮಡಿವಾಳರ ವೃತ್ತಿಯ ಶ್ರೇಷ್ಠತೆಯನ್ನು 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣ ತನ್ನ ವಚನವೊಂದರಲ್ಲಿ ಬಣ್ಣಿಸಿರುವುದು ಹೀಗೆ. ಸಕಲ ಶೋಷಿತರನ್ನು ಒಳಗೊಂಡಿದ್ದ ಶರಣ ಚಳವಳಿಯಲ್ಲಿ ಮಡಿವಾಳ ಮಾಚಿದೇವ ಕೂಡ ಒಬ್ಬರು. ಮಾಚಿದೇವರು ಮಡಿವಾಳರ ಮೂಲ ಪುರುಷ. ಶಿವಶರಣರ ಮತ್ತು ಕಾಯಕದಲ್ಲಿ ನಿಷ್ಠೆ ಹೊಂದಿದ್ದವರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತಿದ್ದ ಶ್ರೇಷ್ಠ ಶರಣ ಎಂಬುದು ಗಮನಾರ್ಹ.

ಬಟ್ಟೆ ತೊಳೆಯುತ್ತಿದ್ದವನೆದುರು ಪ್ರತ್ಯಕ್ಷನಾದ ದೇವರು ನಿನಗೇನು ವರ ಬೇಕು ಎಂದಾಗ ‘ಮೊಣಕಾಲು ಮಟ್ಟ ನೀರು, ಕುತ್ತಿಗೆ ಮಟ್ಟ ಕೂಳು’ ಎಂದು ಬೇಡಿದ್ದನಂತೆ. ವೃತ್ತಿಯಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ಮಡಿವಾಳರ ಬದುಕು, ಆ ವರದಾಚೆಗೆ ಪ್ರಗತಿ ಕಂಡಿಲ್ಲ. ಇಂದು ಪ್ರತಿ ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿ ಕುಲ ಕಸುಬನ್ನು ಮುಂದುವರಿಸುತ್ತಾ ಬಂದಿರುವ ಮಡಿವಾಳರನ್ನು ಧೋಬಿ ಎಂತಲೂ ಗುರುತಿಸುವುದುಂಟು. ಧೋಬಿ ಘಾಟ್ ಇವರ ಕರ್ಮಸ್ಥಳ.

ADVERTISEMENT

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಡಿವಾಳರು ಅಂದಾಜು 20 ಸಾವಿರ ಸಂಖ್ಯೆಯಲ್ಲಿದ್ದಾರೆ. ಮಡಿವಾಳನಗರ, ಚನ್ನಪೇಟೆ, ಬಿಡ್ನಾಳ ಹಾಗೂ ಭವಾನಿನಗರದಲ್ಲಿ ಹೆಚ್ಚಾಗಿದ್ದಾರೆ. ಖಾಲಿ ಜಾಗ ಮತ್ತು ರಸ್ತೆಯಲ್ಲಿ ಸಾಲಾಗಿ ಹೊಳೆಯುವ ಬಟ್ಟೆಗಳು ನೇತಾಡುತ್ತಿದ್ದರೆ, ಅದರ ಹಿಂದೆ ಮಡಿವಾಳರ ಬೆವರಿನ ಶ್ರಮ ಇದೆ ಎಂದರ್ಥ.

ಏಳು ದಶಕದ ಇತಿಹಾಸ

1947ರಲ್ಲಿ ‘ದಿ ಹುಬ್ಬಳ್ಳಿ ಮಡಿವಾಳರ ಕೋ ಆಪರೇಟಿವ್ಸ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್’ ಸ್ಥಾಪನೆಯೊಂದಿಗೆ ಮಡಿವಾಳರ ವೃತ್ತಿಗೆ ಸಾಂಸ್ಥಿಕ ರೂಪ ಸಿಕ್ಕಿತು. ಇದರೊಂದಿಗೆ ಸಂಘಟನೆಗೊಂಡು, ಮನೆ ಮಂದಿಯೆಲ್ಲಾ ದುಡಿಯತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಮುಂದುವರಿದು ಧೋಬಿಘಾಟ್‌ ಆಚೆಗೆ ಸಣ್ಣ ಮತ್ತು ದೊಡ್ಡ ಡ್ರೈ ಕ್ಲೀನಿಂಗ್‌ ಅಂಗಡಿಗಳನ್ನು ಸಹ ಹೊಂದಿದ್ದಾರೆ. ಘಾಟ್‌ನಲ್ಲಿ ಕೇವಲ ಮಡಿವಾಳರಷ್ಟೇ ಅಲ್ಲದೆ ಮುಸ್ಲಿಂ ಹಾಗೂ ಇತರ ಸಮುದಾಯಗಳ ಜನರೂ ಬಂದು ಕೆಲಸ ಮಾಡುತ್ತಾರೆ.

‘ಶಾಲೆ ಮೆಟ್ಟಿಲು ಹತ್ತದವರು, ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದವರು, ಬಡತನದ ಬೇಗೆಯಿಂದ ಹೊರ ಬರಲಾಗದವರು ಇಂದಿಗೂ ಧೋಬಿಘಾಟ್‌ನಲ್ಲಿ ಬಟ್ಟೆ ಒಗೆಯುತ್ತಲೇ ಇದ್ದಾರೆ. ಸದ್ಯ ಸೊಸೈಟಿಯಲ್ಲಿ 320 ಮಂದಿ ಸದಸ್ಯರಿದ್ದಾರೆ. ಘಾಟ್‌ನಲ್ಲಿ ಕೆಲಸ ಮಾಡುವವರಿಂದ ತಿಂಗಳಿಗೆ ₹100 ಬಾಡಿಗೆ (ನೀರು ಮತ್ತ ಕಲ್ಲು ಒದಗಿಸಿದ್ದಕ್ಕಾಗಿ) ಸಂಗ್ರಹಿಸುತ್ತೇವೆ. ಅಗತ್ಯ ಸಂದರ್ಭಗಳಲ್ಲಿ ₹50 ಸಾವಿರದವರೆಗೆ ಸಾಲ ನೀಡುತ್ತೇವೆ. ಮುಂದೆ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಆಲೋಚನೆ ಇದೆ’ ಎನ್ನುತ್ತಾರೆ ಸೊಸೈಟಿಯ ಮ್ಯಾನೇಜರ್ ಹನುಮಂತಪ್ಪ ಕೌತಾಳ.

ಸ್ಥಿತ್ಯಂತರಗೊಂಡ ಬದುಕು

‘ಸಾಮಾನ್ಯವಾಗಿ ವಸತಿ ಗೃಹಗಳು, ಆಸ್ಪತ್ರೆ ಹಾಗೂ ಹೋಟೆಲ್‌ಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ ತೊಳೆದು ಕೊಡುವ ಮಡಿವಾಳರ ಕುಟುಂಬವೊಂದರ ಆದಾಯ ಹೆಚ್ಚೆಂದರೆ ತಿಂಗಳಿಗೆ ₹20 ಸಾವಿರ. ಇತ್ತೀಚಿನ ತಲೆಮಾರಿಗೆ ವೃತ್ತಿ ಬಗ್ಗೆ ಆಸಕ್ತಿ ಕಮ್ಮಿಯಾಗಿದೆ. ಹಾಗಾಗಿ, ಆರ್ಥಿಕವಾಗಿಯಷ್ಟೇ ಅಲ್ಲದೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯೂ ಸಮುದಾಯ ಹಿಂದುಳಿದಿದೆ. ಈ ನಿಟ್ಟಿನಲ್ಲಿ ಸಮುದಾಯವನ್ನು ಒಬಿಸಿಯಿಂದ ಎಸ್‌ಟಿಗೆ ಸೇರಿಸಬೇಕು ಎಂದು ಹಲವು ವರ್ಷಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ’ ಎಂದು ಸೊಸೈಟಿ ಕಾರ್ಯದರ್ಶಿ ಸುರೇಶ ಯಲ್ಲಪ್ಪ ಕೌತಾಳ ಸಮುದಾಯದ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲುತ್ತಾರೆ.

ಚಿತ್ರಗಳು: ತಾಜುದ್ದೀನ್‌ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.