ADVERTISEMENT

ನಾವು ಶುದ್ಧ, ಎಲ್ಲವನ್ನೂ ಎದುರಿಸುತ್ತೇವೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 10:03 IST
Last Updated 3 ಫೆಬ್ರುವರಿ 2023, 10:03 IST
   

ಮುಳಬಾಗಿಲು (ಕೋಲಾರ): 'ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲಾ ನಾಯಕರೂ ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದು, ವ್ಯಕ್ತಿಗಿಂತ ಪಕ್ಷ ಮುಖ್ಯ. ನಮ್ಮಲ್ಲಿ ಇರುವುದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ತಾಲ್ಲೂಕಿನ ಕುರುಡುಮಲೆಯ ಗಣೇಶನಿಗೆ ಶುಕ್ರವಾರ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಪ್ರಜೆಗಳ ಧ್ವನಿಯಾಗಿರುವ ಪ್ರಜಾಧ್ವನಿ ಯಾತ್ರೆಯನ್ನು ನಾನು ಈ ಪವಿತ್ರವಾದ ಸ್ಥಳದಲ್ಲಿ ಆರಂಭಿಸುತ್ತಿದ್ದೇನೆ. ಮತ್ತೊಂದೆಡೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಸವಣ್ಣನವರ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಯಾತ್ರೆ ಆರಂಭಿಸಿದ್ದಾರೆ’ ಎಂದರು.

‘1999ರಲ್ಲಿ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ರಾಜ್ಯದಲ್ಲಿನ ಸಂಕಷ್ಟಗಳಿಗೆ ಪರಿಹಾರ ನೀಡುವಂತೆ ಪ್ರಾರ್ಥನೆ ಮಾಡಿ ಪಾಂಚಜನ್ಯ ಯಾತ್ರೆ ಆರಂಭಿಸಿದ್ದೆವು. ನಂತರ ರಾಜ್ಯಕ್ಕೆ ಒಳ್ಳೆಯದಾಗಿತ್ತು’ ಎಂದರು.

ADVERTISEMENT

‘ರಾಜ್ಯದ ಮೂಡಣ ಬಾಗಿಲು ಎಂದೇ ಕರೆಯುವ ಮುಳಬಾಗಿಲು ಬಹಳ ವಿಶೇಷವಾದ ಸ್ಥಳ. ನಮ್ಮ ಸಂಸ್ಕೃತಿಯಲ್ಲಿ ದೇವ ಮೂಲೆಗೆ ವಿಶೇಷ ಸ್ಥಾನಮಾನವಿದೆ. ನಾವು ಬೇರೆ ಧರ್ಮ, ಸಂಸೃತಿಯನ್ನು ಗೌರವಿಸಿ, ಸಂವಿಧಾನದ ಆಶಯದಂತೆ ನಡೆಯುತ್ತಿದ್ದೇವೆ’ ಎಂದು ಹೇಳಿದರು.

ಚುನಾವಣೆ ಸಮೀಪದಲ್ಲಿ ಸಿಬಿಐ ಅಸ್ತ್ರದ ಪ್ರಯೋಗದ ಬಗ್ಗೆ ಪ್ರತಿಕ್ರಿಯಿಸಿ, ‘ನಾವು ಶುದ್ಧವಾಗಿದ್ದು, ಎಲ್ಲವನ್ನೂ ಎದುರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.