ADVERTISEMENT

ನಮ್ಮದು ರಾಷ್ಟ್ರೀಯ ಪಕ್ಷ; ಭೇದಭಾವದ ಪ್ರಶ್ನೆ ಉದ್ಭವಿಸದು: ಸಿಎಂ ಬೊಮ್ಮಾಯಿ

ಹಿಂದೆ ಏನೆಲ್ಲಾ ಆಗಿದೆ ಎಂದು ವಿರೋಧಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ –ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:30 IST
Last Updated 1 ಆಗಸ್ಟ್ 2022, 21:30 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ದಾವಣಗೆರೆ: ‘ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯತೆಯ ಉದ್ದೇಶದ ಈ ಸರ್ಕಾರ ಯಾರಲ್ಲೂ ಭೇದಭಾವ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಯಾರನ್ನೂ ಕಡೆಗಣಿಸಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಶಿವಯೋಗಿ ಸಿದ್ದರಾಮೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

‘ಈ ಹಿಂದೆ ಆಡಳಿತ ನಡೆಸಿರುವ ಪಕ್ಷಗಳು ಏನೆಲ್ಲಾ ಸಾಧನೆ ಮಾಡಿವೆ ಎಂಬ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಹೇಳಿದರು. ಆ ಮೂಲಕ ‘ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಸಲಹೆಗೆ ಅವರು ತಿರುಗೇಟು ನೀಡಿದರು.

‘ಕರಾವಳಿಯಲ್ಲಿ ನಡೆದಿರುವ ಹತ್ಯೆ ಪ್ರಕರಣಗಳ ತನಿಖೆಗೆ ನಾವು ಸೂಕ್ತ ಕ್ರಮ ಕೈಗೊಂಡಿರುವುದರಿಂದ ಜನರಲ್ಲಿ ವಿಶ್ವಾಸ ಮೂಡಿದೆ. ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ತಹಬದಿಗೆ ಬಂದಿದೆ. ಪೊಲೀಸರು ಖಂಡಿತವಾಗಿಯೂ ಹತ್ಯೆ ಪ್ರಕರಣಗಳ ಎಲ್ಲ ಆರೋಪಿಗಳನ್ನು ಬಂಧಿಸಲಿದ್ದಾರೆ. ಈ ಹಿಂದಿನ ಪ್ರಕರಣಗಳಲ್ಲೂ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಪ್ರಸ್ತುತ ಪ್ರಕರಣದಲ್ಲೂ ಆರೋಪಿಗಳು ಪರಾರಿಯಾಗಲು ಬಿಡುವುದಿಲ್ಲ’
ಎಂದು ಬೊಮ್ಮಾಯಿ ವಿಶ್ವಾಸ
ವ್ಯಕ್ತಪಡಿಸಿದರು.

‘ಗೃಹ ಸಚಿವರ ನಿವಾಸಕ್ಕೆ ಭದ್ರತೆ ಸಮಸ್ಯೆಯಿಲ್ಲ. ಪ್ರತಿಭಟನಾಕಾರರು ಬಂದಾಗ ಭದ್ರತೆಗೆ ನಿಯೋಜಿಸಿದ್ದ ಸಿಬ್ಬಂದಿ ಸ್ಥಳದಲ್ಲಿರಲಿಲ್ಲ. ಅವರಿಗೆ ತಾಕೀತು ಮಾಡಿ ವ್ಯವಸ್ಥೆ ಸರಿಪಡಿಸಲಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಹಿಂದುತ್ವದ ಆಧಾರದಲ್ಲಿಯೇ ಆಡಳಿತ: ಸುನಿಲ್‌

ಉಡುಪಿ: ‘ರಾಜ್ಯದಲ್ಲಿ ಹಿಂದುತ್ವವನ್ನು ಆಧಾರವಾಗಿಟ್ಟುಕೊಂಡೇ ಸರ್ಕಾರ ನಡೆಸುತ್ತಿದ್ದೇವೆ.ಸರ್ಕಾರ ಅಥವಾ ಹಿಂದುತ್ವದ ಪ್ರಶ್ನೆ ಬಂದಾಗ ಸರ್ಕಾರ ಬದಿಗಿಟ್ಟು ಹಿಂದುತ್ವವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ’ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,‘ಸಣ್ಣ ಪ್ರತಿರೋಧ, ಆಕ್ರೋಶ ಅಥವಾ ತೀವ್ರತೆಗೆ ಮಣಿದು ರಾಷ್ಟ್ರೀಯತೆಯಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ‘ ಎಂದು ಸ್ಪಷ್ಟಪಡಿಸಿದರು.

‘ರಾಷ್ಟ್ರೀಯತೆಯ ವಿಚಾರವನ್ನು ಮತ್ತಷ್ಟು ಮುಂದಕ್ಕೆ ಒಯ್ಯುತ್ತೇವೆ. ಜಿಹಾದಿಗಳ ಕುತಂತ್ರ, ಇಸ್ಲಾಮೀಕರಣದ ವೈಭವೀಕರಣ ಹಾಗೂ ಮತೀಯ ಶಕ್ತಿಗಳ ಕಾರ್ಯಸೂಚಿಗಳನ್ನು ಸಮಾಜದ ಮುಂದಿಡುತ್ತೇವೆ’ ಎಂದು ಅವರು ಹೇಳಿದರು.

‘ಶ್ಯಾಮಪ್ರಸಾದ್ ಮುಖರ್ಜಿ ಅವರು ಅಧಿಕಾರ ತ್ಯಜಿಸಿಯೇ ಜನಸಂಘ ಹಾಗೂ ಬಿಜೆಪಿ ಆರಂಭಿಸಿದರು. ಹಿಂದುತ್ವದ ಕಾರಣದಿಂದಲೇ ನಾವು ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾನೂನು ತಂದಿದ್ದೇವೆ’ ಎಂದರು.

ಸರ್ಕಾರದಿಂದಲೇ ಅರಿಸಿನ– ಕುಂಕುಮ, ಬಳೆ

ಬೆಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಈ ಬಾರಿ ವರಮಹಾಲಕ್ಷ್ಮಿಹಬ್ಬದ ದಿನ (ಆಗಸ್ಟ್‌ 5)‌ ವಿಶೇಷ ಪೂಜೆ ನೆರವೇರಿಸಿ, ದೇವಾಲಯಗಳಿಗೆ ಬರುವ ಮಹಿಳೆಯರಿಗೆ ಅರಿಸಿನ-ಕುಂಕುಮ ಮತ್ತು ಹಸಿರು ಬಳೆ ವಿತರಿಸುವಂತೆಸುತ್ತೋಲೆಹೊರಡಿಸಲಾಗಿದೆ.

‘ವರಮಹಾಲಕ್ಷ್ಮಿ, ಸ್ವರ್ಣಗೌರಿ ಮತ್ತು ನವರಾತ್ರಿ ಹಬ್ಬದ ದಿನಗಳಲ್ಲಿ ಸ್ತ್ರೀ ದೇವತೆಯನ್ನು ಆರಾಧಿಸಲಾಗುತ್ತದೆ. ವರಮಹಾಲಕ್ಷ್ಮಿ ಹಬ್ಬದಂದು ಮಹಿಳೆಯರು ಮನೆಯಲ್ಲಿ ಪೂಜೆ ನೆರವೇರಿಸಿ, ದೇವಾಲಯಗಳಿಗೆ ಭೇಟಿ ನೀಡುವ ಸಂಪ್ರದಾಯವಿದೆ. ಸಂಪ್ರದಾಯಕ್ಕೆ ಮತ್ತಷ್ಟು ಇಂಬು ನೀಡಲು ಮಹಿಳೆಯರಿಗೆ ವಿಶೇಷವಾಗಿ ಮಂಗಳದ್ರವ್ಯ ಮತ್ತು ಹಸಿರು ಬಳೆ ನೀಡುವ ಮೂಲಕ ಗೌರವಿಸಬೇಕು ಎಂದು ಇತ್ತೀಚಿಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು’ ಎಂದುಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.