ಬೆಂಗಳೂರು: ಹಲವು ಜನರ ತ್ಯಾಗ, ಬಲಿದಾನದಿಂದ ಮಧ್ಯರಾತ್ರಿ ದೇಶಕ್ಕೆ ದೊರಕಿದ ಸ್ವಾತಂತ್ರ್ಯವನ್ನು ರಕ್ಷಿಸುವುದಕ್ಕಾಗಿ ಹಗಲಿರುಳು ಕಾಯಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಜಂಟಿಯಾಗಿ ವಿಧಾನಸೌಧದ ಮುಂಭಾ ಗದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಎಂಬ ಗೋಪಾಲಕೃಷ್ಣ ಗೋಖಲೆ ಅವರ ಘೋಷಣೆಯೊಂದಿಗೆ ಸ್ವಾತಂತ್ರ್ಯ ಹೋರಾಟ ಹೊಸ ದಿಕ್ಕಿನತ್ತ ಸಾಗಿತು. ಭಗತ್ ಸಿಂಗ್ ಅವರ ಬಲಿದಾನ, ವೀರ ಸಾವರ್ಕರ್ ಅವರಂತಹರ ತ್ಯಾಗದ ಮೂಲಕ ಮುನ್ನಡೆದುದು ಸ್ಮರಣಾರ್ಹ’ ಎಂದರು.
‘ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಚಳವಳಿಯಲ್ಲಿ ಸಾತ್ವಿಕ ಹೋರಾಟಕ್ಕೆ ಸತ್ಯದ ಮೆರುಗು ನೀಡಿದರು. ಅವರೆಲ್ಲರನ್ನೂ ನಾವು ಸದಾ ಕಾಲ ಸ್ಮರಿಸಬೇಕು. ವಿಧಾನಸೌಧದ ಈ ಮೆಟ್ಟಿಲುಗಳು ನವ ಭಾರತದ ನಿರ್ಮಾಣಕ್ಕೆ ಸಾಕ್ಷಿಯಾಗಿವೆ’ ಎಂದು ಮುಖ್ಯಮಂತ್ರಿ ಬಣ್ಣಿಸಿದರು.
ನಾಟಕ ಪ್ರದರ್ಶನ: ಧಾರವಾಡ ರಂಗಾಯಣದ ಕಲಾವಿದರು ‘ದಂಡಿಯಾತ್ರೆ’ ಮತ್ತು ‘ವೀರ ರಾಣಿ ಕಿತ್ತೂರು ಚೆನ್ನಮ್ಮ’ ಕಿರು ನಾಟಕಗಳನ್ನು ಪ್ರಸ್ತುತಪಡಿಸಿದರು. ಶಿವಮೊಗ್ಗ ರಂಗಾಯಣದ ಕಲಾವಿದರು ‘ಏಸೂರು ಕೊಟ್ಟರೂ ಈಸೂರು ಬಿಡೆವು’ ಮತ್ತು ‘ವಿದುರಾಶ್ವತ್ಥ’ ನಾಟಕಗಳನ್ನು ಪ್ರದರ್ಶಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರು ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಕೀಲು ಕುದರೆ ಮತ್ತಿತರ ಜಾನಪದ ನೃತ್ಯಗಳನ್ನು ಪ್ರಸ್ತುತಪಡಿಸಿದರು.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ, ರಜನೀಶ್ ಗೋಯಲ್, ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್. ಹರ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.