ಬೆಂಗಳೂರು: ವಿಧಾನ ಪರಿಷತ್‌ನ 25 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷದ ಬಲವರ್ಧನೆಗೆ ಅನುಕೂಲವಾಗುವ ರೀತಿಯಲ್ಲಿ ಯಾವ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬುದನ್ನು ನಿರ್ಧರಿಸುವಂತೆ ಪಕ್ಷದ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು. ದೂರವಾಣಿ ಕರೆಮಾಡಿ ನನ್ನೊಂದಿಗೆ ಚರ್ಚಿಸಿದ್ದರು. ಆದರೆ, ಯಾವುದೇ ಪಕ್ಷದ ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳದೇ ಇರಲು ನಿರ್ಧರಿಸಲಾಗಿದೆ ಎಂದರು.
ನಾನು ಯಾವತ್ತೂ ಮೈತ್ರಿ ಕುರಿತು ಚರ್ಚಿಸಿಲ್ಲ. ಕೆಲವರು ನಮ್ಮ ಹೇಳಿಕೆಗಳನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಅರ್ಥೈಸಿಕೊಂಡು, ವ್ಯಾಖ್ಯಾನಿಸಿದರು. ಚುನಾವಣೆಯ ಆರಂಭದಲ್ಲೇ ಇಂತಹ ವಿಚಾರಗಳಲ್ಲಿ ನಿರ್ಧಾರಕ್ಕೆ ಬರಲಾಗದು. ಕೊನೆಯ ಹಂತದಲ್ಲೇ ತೀರ್ಮಾನಿಸಬೇಕು. ಅದಕ್ಕಾಗಿ ಈಗ ನಿಲುವನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ತಿಳಿಸಿದರು.
2023ರ ವಿಧಾನಸಭಾ ಚುನಾವಣೆಯೇ ಜೆಡಿಎಸ್‌ನ ಗುರಿ. 123 ಸ್ಥಾನಗಳನ್ನು ಗಳಿಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಈ ಚುನಾವಣೆಯಲ್ಲಿ ನಿರ್ಧಾರ ಕೈಗೊಳ್ಳುವಂತೆ ಸ್ಥಳೀಯ ಮುಖಂಡರಿಗೆ ಸೂಚಿಸಲಾಗಿದೆ. 2023ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗುವ ರೀತಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂಬ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿರುವ ಆರು ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ. ಇಲ್ಲಿ ಯಾರ ಬೆಂಬಲವನ್ನೂ ಜೆಡಿಎಸ್ ಪಡೆದಿಲ್ಲ. ಹಲವು ಜಿಲ್ಲೆಗಳಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ರಾಯಚೂರು, ಕಲಬುರ್ಗಿ, ಯಾದಗಿರಿ ಸೇರಿದಂತೆ ಹಲವೆಡೆ ನಮ್ಮ ಬೆಂಬಲಿತ ಸದಸ್ಯರ ಸಂಖ್ಯೆ ಜಾಸ್ತಿ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತ್ತು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವ ತೀರ್ಮಾನವನ್ನು ಪಕ್ಷದ ಸ್ಥಳೀಯ ಮುಖಂಡರು ಕೈಗೊಂಡಿದ್ದಾರೆ. ಎಲ್ಲರೂ ತಮ್ಮ ಜತೆ ಸಮಾಲೋಚಿಸಿದ ಬಳಿಕವೇ ನಿರ್ಧಾರ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಹಸ್ಯ ಇಲ್ಲ ಎಂದರು.
ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಆರು ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಲಿದೆ. ತಾವು ಯಾವ ಪಕ್ಷದ ಬೆಂಬಲವನ್ನೂ ಕೋರಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಕೂಡ ಎಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿಲ್ಲ. ಜೆಡಿಎಸ್ ಪಕ್ಷಕಕ್ಕೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳೂ ಮಿತ್ರರಲ್ಲ. ಇಬ್ಬರೂ ತಮ್ಮ ಪಕ್ಷದ ಶತ್ರುಗಳೇ. ಅವರಿಗೆ ಅಗತ್ಯವಿದ್ದಾಗ ಮಾತ್ರ ಮಿತ್ರರಾಗಲು ಬರುತ್ತಾರೆ ಎಂದು ಹೇಳಿದರು.
ಮೈತ್ರಿ ಸರ್ಕಾರದ ರಚನೆಯಿಂದ ಜೆಡಿಎಸ್‌ಗೆ ಹಾನಿಯಾಗಿತ್ತು. ಈಗ ವಿಧಾನ ಪರಿಷತ್‌ನ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಪುಟಿದೇಳಲಿದೆ ಎಂದರು.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬುದು ಕಾಂಗ್ರೆಸ್‌ನ ಕೆಲವು ನಾಯಕರ ರಾಜಕೀಯ ಮಂತ್ರ. ಎಲ್ಲ ಸಂದರ್ಭಗಳಲ್ಲೂ ಇದನ್ನೇ ಹೇಳುತ್ತಿದ್ದಾರೆ. ಜೆಡಿಎಸ್ ಒಂದು ಕುಟುಂಬದ ಪಕ್ಷ ಎಂಬುದು ಕೂಡ ಅದೇ ರೀತಿಯ ಹೇಳಿಕೆ. ಹೀಗೆ ಹೇಳುವವವರಿಗೆ ಬಾದಾಮಿಯಲ್ಲಿ ಸರಿಯಾಗಿ ಆಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.