ADVERTISEMENT

ಭೂಪಟದಿಂದ ಪಾಕಿಸ್ತಾನ ತೆಗೆದು ಹಾಕುತ್ತೇವೆ: ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 20:59 IST
Last Updated 23 ಜನವರಿ 2020, 20:59 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ‘ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ. ಈ ದೇಶವನ್ನು ಭೂಪಟದಿಂದಲೇ ತೆಗೆದುಹಾಕುತ್ತೇವೆ’ ಎಂದು ಕಂದಾಯ ಸಚಿವ ಆರ್.ಅಶೋಕ ಗುರುವಾರ ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಅಂಗವಾಗಿ ಗುರುವಾರ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಭಯೋತ್ಪಾದನೆ ಸೃಷ್ಟಿಸುತ್ತಿರುವ ಪಾಕಿಸ್ತಾನ ಭೂಪಟದಲ್ಲೇ ಇರಬಾರದು’ ಎಂದರು.

‘ಪಾಕಿಸ್ತಾನದ ಹೆಸರು ಹೇಳದಿದ್ದರೆ ಬಿಜೆಪಿಯವರಿಗೆ ಒಂದು ವೋಟು ಬರುವುದಿಲ್ಲ’ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಭಾರತೀಯರಾದ ನಾವು ನಮ್ಮ ಧ್ವಜಕ್ಕೆ ಗೌರವ ಕೊಡುತ್ತೇವೆ. ಅವರಿಗೆ ಆ ದೇಶದ ಮೇಲೆ ಪ್ರೀತಿ ಹೆಚ್ಚಾಗಿದ್ದು, ಮುಸ್ಲಿಮರನ್ನೇ ಓಲೈಸಲಿ’ ಎಂದು ತಿರುಗೇಟು ನೀಡಿದರು.

ADVERTISEMENT

‘ಪಾಕ್‌–ಬಾಂಗ್ಲಾ ಸೇರಿ ಅಖಂಡ ಭಾರತ’
ಚಿತ್ರದುರ್ಗ:
‘ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಸೇರಿಸಿ ಅಖಂಡ ಭಾರತ ನಿರ್ಮಾಣ ಮಾಡುವುದು ಬಿಜೆಪಿ ಸಂಕಲ್ಪ. ಈ ಎರಡೂ ರಾಷ್ಟ್ರಗಳಲ್ಲಿ ಹಿಂದುತ್ವವನ್ನು ಸಾರಿ ಹೇಳುತ್ತೇವೆ’ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಖಂಡ ಭಾರತ ನಿರ್ಮಾಣ ದೇಶ ಭಕ್ತರ ಕನಸು. ಭಯೋತ್ಪಾದನೆ ನಿಗ್ರಹ ಮಾಡಲು ಇದು ಅತ್ಯಗತ್ಯ. ಉಗ್ರ ಚಟುವಟಿಕೆಯಲ್ಲಿ ತೊಡಗಿದವರನ್ನು ಒದ್ದು ಹೊರಗೆ ಹಾಕುತ್ತೇವೆ’ ಎಂದು ಚಿಟಕಿ ಹೊಡೆದರು.

‘‍ಫ್ರೀ ಕಾಶ್ಮಿರಕ್ಕೆ ಕುಮ್ಮಕ್ಕು ನೀಡಿ ಮತ್ತೊಂದು ಪಾಕಿಸ್ತಾನ ಸೃಷ್ಟಿಸುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ ಸೇರಿ ವಿರೋಧ ಪಕ್ಷಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. ಈ ದೇಶದ ಒಂದಿಂಚು ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.