ADVERTISEMENT

ವಾರಾಂತ್ಯ ಕರ್ಫ್ಯೂ ಯಶಸ್ವಿ: ಗೃಹ ಸಚಿವ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 10:04 IST
Last Updated 24 ಏಪ್ರಿಲ್ 2021, 10:04 IST
ತುಮಕೂರು ರಸ್ತೆ ಫ್ಲೈಓವರ್‌ನ ನೋಟ– ಚಿತ್ರ: ರಂಜು.ಪಿ
ತುಮಕೂರು ರಸ್ತೆ ಫ್ಲೈಓವರ್‌ನ ನೋಟ– ಚಿತ್ರ: ರಂಜು.ಪಿ   

ಬೆಂಗಳೂರು: ‘ಕೊರೊನಾ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ತೀವ್ರವಾಗಿದೆ. ನಿಯಂತ್ರಣಕ್ಕೆ ಜನ ಸಹಕಾರ ಕೊಡುತ್ತಿದ್ದಾರೆ. ಜನರಲ್ಲೂ ಅರಿವು ಮೂಡಿದೆ. ಪೊಲೀಸರು ಕೂಡ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ವಾರಾಂತ್ಯ ಕರ್ಫ್ಯೂ ಯಶಸ್ವಿಯಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಎಲ್ಲ ಎಡಿಜಿಪಿ, ಬೆಂಗಳೂರು ಕಮಿಷನರ್ ಜೊತೆ ಮಾತನಾಡಿದ್ದೇನೆ. ಅಂಥದ್ದೇನೂ ಸಮಸ್ಯೆ ಆಗಿಲ್ಲ’ ಎಂದರು.

‘ಸೋಮವಾರ ಸಂಪುಟ ಸಭೆ ಇದೆ. ರಾಜ್ಯ ಸರ್ಕಾರ ಲಸಿಕೆ ಖರೀದಿಗೆ ₹ 1 ಕೋಟಿ ಬಿಡುಗಡೆ ಮಾಡಿದೆ. ಎಷ್ಟು ಲಸಿಕೆ ಬೇಕು, ಅಷ್ಟಕ್ಕೆ ಹಣ ನೀಡಲು ಸರ್ಕಾರ ಸಿದ್ಧವಿದೆ. ಲಸಿಕೆ ವಿತರಣೆ ಕಾರ್ಯಕ್ರಮದ ಬಗ್ಗೆ ಈ ಸಭೆಯಲ್ಲಿ ನಿರ್ಧರಿಸುತ್ತೇವೆ’ ಎಂದರು.

ADVERTISEMENT

‘ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿದಾಗ ಸಮಸ್ಯೆಯಾಗುವುದು ಸಹಜ. ಆಕ್ಸಿಜನ್ ಉತ್ಪಾದನೆ ಅಷ್ಟೇ ಇದೆ, ಬಳಕೆ ಮಾತ್ರ ಹೆಚ್ಚಾಗಿದೆ. ಆಕ್ಸಿಜನ್ ಪೂರೈಕೆ ಸಂಬಂಧ ಶುಕ್ರವಾರ ಮೂರು ತಾಸು ಸಭೆ ಮಾಡಿದ್ದೇವೆ. ಸುಮಾರು 800 ಟನ್ ಸರಬರಾಜು ಆಗುತ್ತಿದೆ’ ಎಂದರು.

‘ಆಕ್ಸಿಜನ್ ಉತ್ಪಾದಕರ ಜೊತೆ ಮುಖ್ಯ ಕಾರ್ಯದರ್ಶಿ ಮಾತನಾಡಿದ್ದಾರೆ. ಹೆಚ್ಚುವರಿ ಆಕ್ಸಿಜನ್ ಪಡೆದುಕೊಂಡಿದ್ದೇವೆ. ನಮ್ಮಲ್ಲಿರುವ ಘಟಕಗಳಲ್ಲೂ ಆಕ್ಸಿಜನ್ ಉತ್ಪಾದನೆ ಮಾಡುತ್ತೇವೆ. ಕೆಲವು ಸಿಮೆಂಟ್ ಕಂಪನಿಗಳಲ್ಲಿ ಉತ್ಪಾದನೆ ಆಗಿರುವುದನ್ನೂ ವೈದ್ಯಕೀಯ ಅಗತ್ಯಗಳಿಗೆ ಬಳಸುತ್ತೇವೆ. ರೆಮ್‌ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಂಡಿದ್ದೇವೆ. ಬೆಂಗಳೂರು ಮೈಸೂರಿನಲ್ಲಿ ಕೆಲವರನ್ನು ಬಂಧಿಸಿದ್ದೇವೆ’ ಎಂದರು.

‘ಜನರೂ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಕೊರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು, ಕಾನೂನು ಉಲ್ಲಂಘಿಸುವುದರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.