ADVERTISEMENT

ಮಕ್ಕಳಿಗೆ ವಾರಾಂತ್ಯದಲ್ಲಿ ಆರೋಗ್ಯ ತರಗತಿ: ರೋಗಗಳು, ಸ್ವಚ್ಛತೆ ಬಗ್ಗೆ ಅರಿವು

ಶಿಕ್ಷಕರಿಗೆ ತಜ್ಞರಿಂದ ತರಬೇತಿ

ವರುಣ ಹೆಗಡೆ
Published 11 ಮಾರ್ಚ್ 2020, 19:34 IST
Last Updated 11 ಮಾರ್ಚ್ 2020, 19:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ರಾಜ್ಯದಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆರೋಗ್ಯ ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ಈ ಸಂಬಂಧ ಶಿಕ್ಷಕರನ್ನು ಜುಲೈ ಅಂತ್ಯದೊಳಗೆಆರೋಗ್ಯ ರಾಯಭಾರಿಗಳನ್ನಾಗಿ ರೂಪಿಸಲಾಗುತ್ತದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌ಬಿಎಸ್‌ಕೆ)ಆರೋಗ್ಯ ಮತ್ತು ಕುಟುಂಬ ಇಲಾಖೆ ಈ ಯೋಜನೆ ರೂಪಿಸಿದೆ.ಮಕ್ಕಳಲ್ಲಿ ಆಗಾಗ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗಗಳನ್ನು ದೂರ ಮಾಡುವುದು ಇದರ ಮುಖ್ಯ ಉದ್ದೇಶ. ಆರೋಗ್ಯ ತಜ್ಞರಿಂದ ಆಯ್ದ ಶಿಕ್ಷಕರಿಗೆ ಮಲೇರಿಯಾ, ಡೆಂಗಿ ಸೇರಿದಂತೆ30 ಸಾಮಾನ್ಯ ಕಾಯಿಲೆಗಳನ್ನು ಪತ್ತೆ ಮಾಡುವ ಸಂಬಂಧ ಅಗತ್ಯ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆಪ್ರತಿ ಶನಿವಾರ ಪ್ರತ್ಯೇಕ ಪ್ರಾಯೋಗಿಕ ತರಗತಿ ನಡೆಸಲಾಗುತ್ತದೆ.

ಶಾಲಾ ಆರೋಗ್ಯ ಕಾರ್ಯಕ್ರಮದಡಿ ಈಗಾಗಲೇಅಲ್ಬೆಂಡಜಾಲ್‌, ಕ್ಯಾಲ್ಸಿಯಂ, ಫೋಲಿಕ್‌ ಆಸಿಡ್‌ ಮತ್ತು ಕಬ್ಬಿಣಾಂಶದಂತಹ ಮಾತ್ರೆಗಳನ್ನು ಮಕ್ಕಳಿಗೆ ವಿತರಿಸಲಾಗುತ್ತಿದೆ. ಇಷ್ಟಾಗಿಯೂ ಸಾವಿರಾರು ಮಕ್ಕಳು ಅಪೌಷ್ಟಿಕತೆ ಮತ್ತು ವಿವಿಧ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಇದನ್ನು ತಪ್ಪಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಸಹಯೋಗದಲ್ಲಿ ಶಿಕ್ಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜವಾಬ್ದಾರಿಯನ್ನೂ ನೀಡಲಾಗುತ್ತಿದೆ.

ADVERTISEMENT

ಪ್ರಾಯೋಗಿಕವಾಗಿ ಜಾರಿ: ‘ಈ ಕಾರ್ಯಕ್ರಮವನ್ನು ಒಮ್ಮೆಲೇ ಎಲ್ಲ ಶಾಲೆಗಳಲ್ಲಿ ಅನುಷ್ಠಾನ ಮಾಡುವುದು ಕಷ್ಟ. ಹಾಗಾಗಿ ಕೆಲ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದರ ಫಲಿತಾಂಶದ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ಶಾಲೆಯಿಂದ ಇಬ್ಬರು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ’ ಎಂದುಆರ್‌ಬಿಎಸ್‌ಕೆ ಉಪ ನಿರ್ದೇಶಕಿ ಡಾ.ವೀಣಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಹಾರದ ಕ್ರಮ, ಕೈ ತೊಳೆದುಕೊಳ್ಳುವುದು, ಯೋಗ, ಧ್ಯಾನದ ವಿಧಾನ ಹಾಗೂ ವಿವಿಧ ಕಾಯಿಲೆಗಳ ಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.