ADVERTISEMENT

ಡಿಕೆಶಿ ಎತ್ತಿ ಕುಣಿದ ಕಾರ್ಯಕರ್ತರು, ವಾಹನದಲ್ಲಿ ಮೆರವಣಿಗೆ, ಎಚ್‌ಡಿಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 10:38 IST
Last Updated 26 ಅಕ್ಟೋಬರ್ 2019, 10:38 IST
   

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿನ ಟರ್ಮಿನಲ್‌ನಲ್ಲಿ ನೂರಾರು ಕಾರ್ಯಕರ್ತರು ಸೇರಿದ್ದು, ಡಿಕೆಶಿ ಅವರನ್ನು ಹೊತ್ತುಕೊಂಡೇ ಬರುತ್ತಿದ್ದಾರೆ. ಟರ್ಮಿನಲ್‌ಗೆ ಅಭಿಮಾನಿಗಳಿಗೆ ತೆರಳುವುದಕ್ಕೆ ಅವಕಾಶ ನೀಡಿರದಿದ್ದರೂ, ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿಗೆ ಬರುವಲ್ಲಿ ಯಶಸ್ವಿಯಾಗಿದ್ದರು.

ಕಾಂಗ್ರೆಸ್‌ ಜತೆಗೆ ಜೆಡಿಎಸ್‌ ಪಕ್ಷದ ಬಾವುಟುಗಳೂ ಹಾರಾಡುತ್ತಿದ್ದು, ಹಲವಾರು ಮಂದಿ ಅವರಿಗೆ ಹಾರ ಹಾಕಲು ಪ್ರಯತ್ನಿಸಿದರು.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಬಂದ ವಿಶ್ವವಿಜೇತ ಕ್ರೀಡಾಪಟುವಿನ ರೀತಿಯಲ್ಲಿ ಡಿಕೆಶಿ ಅವರನ್ನು ಅಭಿಮಾನಿಗಳು ಹೊತ್ತುಕೊಂಡು ಸಂಭ್ರಮಿಸುತ್ತಿದ್ದು, ತೆರೆದ ವಾಹನದಲ್ಲಿ ಅವರು ಬೆಂಗಳೂರಿನತ್ತ ತೆರಳಲಿದ್ದಾರೆ.

ADVERTISEMENT

ತೆರೆದ ವಾಹನದಲ್ಲಿ ಹೊರಟ ಡಿಕೆಶಿ

ಜಾರಿ ನಿರ್ದೇಶನಾಲಯದ ವಿಚಾರಣೆಗಾಗಿ ಸುಮಾರು 50 ದಿನಗಳ ಕಾಲ ನವದೆಹಲಿಯಲ್ಲಿ ಬಂಧನದಲ್ಲಿದ್ದ ಕಾಂಗ್ರೆಸ್‌ ಶಾಸಕ ಡಿ. ಕೆ. ಶಿವಕುಮಾರ್‌ ಅವರು ಶನಿವಾರ ಮಧ್ಯಾಹ್ನ 2.40ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದರು.

ಅಭಿಮಾನಿಗಳು ಸಾದಹಳ್ಳಿ ಗೇಟ್‌ನಿಂದ ಮುಂದಕ್ಕೆ ವಿಮಾನನಿಲ್ದಾಣದತ್ತ ಬರಬಾರದು ಎಂದು ಪೊಲೀಸರು ಸೂಚನೆ ನೀಡಿದ್ದರೂ, ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ವಿಮಾನನಿಲ್ದಾಣದ ಟರ್ಮಿನಲ್‌ಗೇ ಬಂದಿದ್ದರು. ಶಿವಕುಮಾರ್‌ ಹೊರಗೆ ಬರುತ್ತಿದ್ದಂತೆಯೇ ಹೆಗಲಲ್ಲಿ ಹೊತ್ತುಕೊಂಡ ಅಭಿಮಾನಿಗಳು, ಅವರಿಗೆ ಹೂವಿನ ಮಳೆ ಸುರಿಸಿದರು. ಹಲವರು ಹೂ ಗುಚ್ಛ ನೀಡಿದರೆ, ಇನ್ನು ಕೆಲವರು ಹಾರ ಹಾಕಿದರು.

ಡಿಕೆಶಿ, ಎಚ್‌‌ಡಿಕೆ ಭೇಟಿ

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಸ್ವಾಗತ ಕೋರಿದರು.

ಈ ಸಮಯದಲ್ಲಿ ಇಬ್ಬರೂ ಪರಸ್ಪರ ಕೈಕೈ ಕುಲುಕಿದರು. ಐದು ನಿಮಿಷಗಳ ಕಾಲ ಮಾತುಕತೆ ನಡೆಸಿದ ನಂತರ ಅಭಿಮಾನಿಗಳನ್ನು ಕಾಣಲು ಡಿ.ಕೆ.ಶಿವಕುಮಾರ್ ತೆರಳಿದರು. ನಂತರ ಕುಮಾರಸ್ವಾಮಿ ವಾಪಸಾದರು. ಬದ್ಧ ರಾಜಕೀಯ ವೈರಿಗಳಾಗಿದ್ದ ಕುಮಾರಸ್ವಾಮಿ ಮತ್ತು ಶಿವಕುಮಾರ್ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಸ್ನೇಹಿತರಾಗಿದ್ದಾರೆ.

ಮೆರವಣಿಗೆ : ವಿಮಾನನಿಲ್ದಾಣದಿಂದ ಹೊರಬಂದಿರುವ ಡಿಕೆಶಿ ಅವರು ಇದೀಗ ತೆರೆದ ವಾಹನ ಏರಿದ್ದು, ಮೆರವಣಿಗೆ ಆರಂಭವಾಗಿದೆ. ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಮೆರವಣಿಗೆ ನಿಧಾನವಾಗಿ ಆರಂಭವಾಗಿದ್ದು, ಸಾದಹಳ್ಳಿ ಗೇಟ್‌ನಲ್ಲಿ ದೊಡ್ಡ ಸೇಬಿನ ಹಾರ ಅವರ ಕೊರಳು ಅಲಂಕರಿಸಲು ಸಜ್ಜಾಗಿದೆ. ಎರಡು ಕ್ರೇನ್‌ಗಳು 600 ಕೆ.ಜಿ. ತೂಕದ 20 ಅಡಿ ಉದ್ದದ ಸೇಬಿನ ಹಾರವನ್ನು ತೋರಣದಂತೆ ಎತ್ತಿ ಹಿಡಿದುಕೊಂಡಿದ್ದು, ಕಲಾತಂಡಗಳು ಅಲ್ಲಿ ಉತ್ಸಾಹದಿಂದ ಕಲಾ ಪ್ರದರ್ಶನ ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.