ADVERTISEMENT

ಪೊಲೀಸರ ಬಾಡಿ ವೋರ್ನ್‌ ಕ್ಯಾಮೆರಾ ಏನಾದವು?

ಇಲಾಖೆಯಲ್ಲಿ ದಕ್ಷತೆ ತರಲು ನೀಡಿದ ಕ್ಯಾಮೆರಾ ಮೂಲೆಗೆ ಎಸೆದ ಅಧಿಕಾರಿಗಳು, ಬದಲಾಗದ ವ್ಯವಸ್ಥೆ

ಶರತ್‌ ಎಂ.ಆರ್‌.
Published 11 ಮಾರ್ಚ್ 2021, 3:45 IST
Last Updated 11 ಮಾರ್ಚ್ 2021, 3:45 IST
ಮಾತಿನ ಚಕಮಕಿ ವೇಳೆ ಮಹಿಳಾ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಾಡಿ ವೋರ್ನ್‌ ಕ್ಯಾಮೆರಾ ಧರಿಸದಿರುವುದು
ಮಾತಿನ ಚಕಮಕಿ ವೇಳೆ ಮಹಿಳಾ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಾಡಿ ವೋರ್ನ್‌ ಕ್ಯಾಮೆರಾ ಧರಿಸದಿರುವುದು   

ಮಂಡ್ಯ: ವಾಹನ ತಪಾಸಣೆ ವೇಳೆ ಮಹಿಳಾ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಸವಿತಾ, ಯುವತಿಯ ಕೆನ್ನೆಗೆ ಬಾರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಕರ್ತವ್ಯ ಸಂದರ್ಭದಲ್ಲಿ ಪೊಲೀಸರ-ಸಾರ್ವಜನಿಕರ ವರ್ತನೆ ತಿಳಿದು ಕೊಳ್ಳುವ, ಸುಧಾರಿಸುವ ಸಲುವಾಗಿ ಜಿಲ್ಲೆಯ ಪೊಲೀಸರಿಗೆ ನೀಡಿದ ಬಾಡಿ ವೋರ್ನ್‌ ಕ್ಯಾಮೆರಾ ಎಲ್ಲಿ ಹೋದವು ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಜನರು ಪೊಲೀಸರೊಂದಿಗೆ ಯಾವ ರೀತಿ ಸಂವಹನ ನಡೆಸುತ್ತಾರೆ, ಪೊಲೀಸ್‌ ಸಿಬ್ಬಂದಿ ಅಧಿಕಾರ ದುರ್ಬಳಕೆ ತಪ್ಪಿಸುವ ಸಲುವಾಗಿ 2019ರ ಅಕ್ಟೋಬರ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿದ್ದ ಕೆ.ಪರಶುರಾಮ್‌ ಅವರು ಜಿಲ್ಲೆಯ ವಿವಿಧ ಠಾಣೆಗಳ ಅಧಿಕಾರಿಗಳಿಗೆ 40 ಕ್ಯಾಮೆರಾಗಳನ್ನು ನೀಡಿದ್ದರು. ಆದರೆ ಪೊಲೀಸರು ವಾಹನ ತಪಾಸಣೆ, ಸಾರ್ವಜನಿಕರ ಜೊತೆ ಸಂವಹನ ವೇಳೆ ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ಬಳಸದಿರುವುದು ಸಾಕಷ್ಟು ಘರ್ಷಣೆಗೆ ಕಾರಣವಾಗಿದೆ.

ನಗರದ ಬೆಸಗರಹಳ್ಳಿ ರಾಮಣ್ಣ ಸರ್ಕಲ್‌ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಯುವತಿಯ ದ್ವಿಚಕ್ರ ವಾಹನವನ್ನು ಪೊಲೀಸರು ತಡೆದರು. ದಾಖಲಾತಿ ಪರಿಶೀಲನೆ ವೇಳೆ ಹೆಲ್ಮೆಟ್‌ ಧರಿಸದ ಯುವತಿಗೆ ಪೊಲೀಸರು ದಂಡ ವಿಧಿಸಿದರು. ಈ ಸಂದರ್ಭದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಅವರು ಬಾಡಿ ವಾರ್ನ್‌ ಕ್ಯಾಮೆರಾ ಧರಿಸದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ADVERTISEMENT

ಕ್ಯಾಮೆರಾಗಳಿಂದ ಹಲವಾರು ಉಪಯೋಗಗಳಿದ್ದು, ಆದರೆ ಪೊಲೀಸರು ಅದರ ಬಳಕೆಗೆ ತೀವ್ರ ಅಸಡ್ಡೆ ತೋರಿರುವುದು ಜಿಲ್ಲೆಯ ಎಲ್ಲೆಡೆ ಕಂಡು ಬರುತ್ತಿದೆ. ಎಲ್ಲಾ ಸ್ಥಳಗಳಲ್ಲೂ ಸಿಸಿಟಿವಿ ಕ್ಯಾಮೆರಾ ಇರುವುದಿಲ್ಲ. ಪೊಲೀಸ್‌ ಸಿಬ್ಬಂದಿಯ ಸುರಕ್ಷತೆ, ಅಪರಾಧ ತಡೆ, ಸಾಕ್ಷಿ ಸಂರಕ್ಷಣೆಗೆ ಉಪಯೋಗ ಆಗಲಿ ಎಂಬ ಕಾರಣಕ್ಕೆ ನೀಡಿರುವ ರಹಸ್ಯ ಕ್ಯಾಮೆರಾಗಳನ್ನು ಅಧಿಕಾರಿಗಳು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ, ಪ್ರಕರಣ ದಾಖಲು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ಯಾಮೆರಾಗಳು ಪೊಲೀಸರ ಸಹಾಯಕ್ಕೆ ಬರಲಿ ಎಂದು ನೀಡಿರುವ ಬಾಡಿ ವೋರ್ನ್‌ ಕ್ಯಾಮೆರಾ ನೆರವಿಗೆ ಬರುತ್ತಿಲ್ಲ.

‘ಪೊಲೀಸ್‌ ಕಾರ್ಯನಿರ್ವಹಣೆ ಈ ಕ್ಯಾಮೆರಾಗಳಲ್ಲಿ ಸೆರೆಯಾಗಲಿದ್ದು ಸಾಕ್ಷ್ಯಗಳ ನಾಶ ತಡೆಗೆ ಸಹಕಾರಿಯಾ ಗಲಿವೆ. ಪೊಲೀಸ್‌ ಇಲಾಖೆಯಲ್ಲಿ ದಕ್ಷತೆ ತರುವುದು ಕೂಡ ಈ ಕ್ಯಾಮೆರಾ ಬಳಕೆಯ ಮುಖ್ಯ ಉದ್ದೇಶವಾಗಿದೆ. ಅಪರಾಧ ತಡೆ, ಪರಿಸ್ಥಿತಿಯ ಅವ ಲೋಕನ, ಘಟನಾ ಸ್ಥಳದಲ್ಲಿ ನಿಜವಾಗಿ ಜರುಗಿದ್ದೇನು ಎಂಬ ಪ್ರಶ್ನೆಗೆ ಉತ್ತರ ಕ್ಯಾಮೆರಾದಿಂದ ದೊರೆಯಲಿದೆ. ಪೊಲೀಸರ ಮೇಲೆ ಬರುವ ಆರೋಪಗಳನ್ನು ತಪ್ಪಿಸಿ ಮತ್ತಷ್ಟು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಲು ನೆರವಾಗಬೇಕಾದ ಕ್ಯಾಮೆರಾ ಎಲ್ಲಿದೆ ಎಂಬ ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕಿದೆ’ ಸಾಮಾಜಿಕ ಕಾರ್ತಕರ್ತರೊಬ್ಬರು ತಿಳಿಸಿದರು.

‘ಆನ್‌ಲೈನ್‌ ಪೇಮೆಂಟ್‌ ಏಕಿಲ್ಲ?’

ಕರೆಂಟ್‌ ಬಿಲ್‌, ನೀರಿನ ಬಿಲ್‌ ಪಾವತಿ, ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಆನ್‌ಲೈನ್‌ ಪಾವತಿ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳು ನಗದು ರಹಿತ ವ್ಯವಹಾರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇದಕ್ಕೆ ಒಗ್ಗಿಕೊಂಡಿದ್ದಾರೆ. ಆದರೆ ಪೊಲೀಸ್‌ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲೇ ಅದರ ಅಳವಡಿಕೆ ಮಾಡದಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

‘ಹೊರಗೆ ಬಂದ ಸಂದರ್ಭದಲ್ಲಿ ಕೆಲವೊಮ್ಮೆ ಹಣ ಇರುವುದಿಲ್ಲ. ಆದರೂ ದಂಡ ವಿಧಿಸಿದ ಸಂದರ್ಭದಲ್ಲಿ ಇಲಾಖೆಯ ನಿಯಮದನ್ವಯ ನಗದು ನೀಡಲೇಬೇಕು ಎಂಬ ಪಟ್ಟು ಹಿಡಿಯುವುದು ಸಾಕಷ್ಟು ಕಿರಿಕಿರಿಗೆ ಕಾರಣವಾಗಿದೆ’ ಎಂದು ವಾಹನ ಸವಾರರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.