ADVERTISEMENT

ಅಶ್ವತ್ಥ ನಾರಾಯಣ ಡಿಸಿಎಂ ಆಗಿದ್ದು ಯಾರಿಂದ?: ಎಚ್‌.ವಿಶ್ವನಾಥ್‌ ತಿರುಗೇಟು 

ಸಚಿವ ಸ್ಥಾನದ ಭರವಸೆಯನ್ನು ಬಿಎಸ್‌ವೈ ನೀಡಿದ್ದಾರೆ​

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 11:51 IST
Last Updated 13 ಜೂನ್ 2020, 11:51 IST
ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್
ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್   

ಮೈಸೂರು: ‘ಡಾ.ಅಶ್ವತ್ಥ ನಾರಾಯಣ ಅವರು ಉಪಮುಖ್ಯಮಂತ್ರಿ ಆಗಿದ್ದು ಯಾರಿಂದ? ನಮ್ಮ ಹಾಗೂ ಮುಖ್ಯಮಂತ್ರಿ ನಡುವೆ ನಡುವೆ ಏನು ಮಾತುಕತೆ, ಒಪ್ಪಂದ ನಡೆದಿದೆ ಎಂಬುದು ಅವರಿಗೇನು ಗೊತ್ತು? ಅವರು ಏನೂ ಮಾತನಾಡದೆ ಸುಮ್ಮನಿದ್ದರೇ ಒಳ್ಳೆಯದು’ ಎಂದು ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ.

ವಿಶ್ವನಾಥ್‌ ಹಾಗೂ ಎಂಟಿಬಿ ನಾಗರಾಜ್‌ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡುವ ಭರವಸೆ ನೀಡಿರಲಿಲ್ಲ ಎಂಬ ಡಾ. ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಚುನಾವಣೆಯಲ್ಲಿ ಸ್ಪರ್ಧಿಸುವುದು ಅಪರಾಧವೇ? ಹುಣಸೂರು ಕ್ಷೇತ್ರದಲ್ಲಿ ಹಿಂದೆ ನಾನು ಗೆದ್ದಿದ್ದೆ. ಹೀಗಾಗಿ, ಉಪಚುನಾವಣೆಯಲ್ಲಿ ಸ್ಪರ್ಧಿಸಿದೆ; ಸೋಲು ಎದುರಾಯಿತು. ಇಂದಿರಾ ಗಾಂಧಿ, ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೋತಿಲ್ಲವೇ? ಅಷ್ಟಕ್ಕೂ ಬಿಜೆಪಿಯಲ್ಲಿ ಸೋತವರನ್ನೇ ಉಪಮುಖ್ಯಮಂತ್ರಿಯನ್ನಾಗಿ ಮಾಡಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಅಶ್ವತ್ಥ ನಾರಾಯಣ ಜೊತೆ ನಾವು ಯಾವುದೇ ರೀತಿಯ ಚರ್ಚೆ ನಡೆಸಿಲ್ಲ. ಉಪಮುಖ್ಯಮಂತ್ರಿ ಎಂಬುದನ್ನು ಬಿಟ್ಟರೆ ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಮ್ಮೆಲ್ಲರ ಜೊತೆ ತಿರುಗಾಡಿಕೊಂಡಿದ್ದರು ಅಷ್ಟೆ. ಬಿ.ಎಸ್‌.ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾರೇ ಮಾತನಾಡಿದರೂ ಅದಕ್ಕೆ ಅರ್ಥವಿಲ್ಲ’ ಎಂದು ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮನ್ನು ಸಚಿವರನ್ನಾಗಿ ಮಾಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಈ ವಿಚಾರ ಸಂಸದ ಹಾಗೂ ನನ್ನ ಆತ್ಮೀಯ ಗೆಳೆಯ ವಿ. ಶ್ರೀನಿವಾಸಪ್ರಸಾದ್‌ ಅವರಿಗೂ ಗೊತ್ತಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಏಕೈಕ ನಾಯಕ ಯಡಿಯೂರಪ್ಪ. ರಾಜಕಾರಣ ನಡೆಯುವುದು ನಂಬಿಕೆ ಹಾಗೂ ಭರವಸೆ ಮೇಲೆ. ಹೀಗಾಗಿ, ವಿಧಾನ ಪರಿಷತ್‌ ಟಿಕೆಟ್‌ ಹಾಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.