ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಅಧಿಕೃತ ನಿವಾಸದ ಗೋಡೆಯ ಮೇಲೆ ಒಂದು ಸಿಸಿಟಿವಿ ಕ್ಯಾಮೆರಾ ಇದ್ದು, ಹೊರಾವರಣದ ಕಾಂಪಂಡ್‌ನಿಂದ ಬಹಳ ದೂರವಿದೆ.
ಪ್ರಜಾವಾಣಿ ಚಿತ್ರ: ರಂಜು ಪಿ.
ಬೆಂಗಳೂರು: ರಾಜ್ಯದಾದ್ಯಂತ ಶ್ರೀಸಾಮಾನ್ಯರ ಮನೆ–ತೋಟ, ನಗರ–ಪಟ್ಟಣಗಳ ಪ್ರತಿ ಬೀದಿಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಇದೆ. ಸಚಿವರ ಅಧಿಕೃತ ನಿವಾಸಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿನ ಭದ್ರತೆಯೇ ಇಲ್ಲ.
ಬೆಂಗಳೂರಿನ ಬಹುತೇಕ ಎಲ್ಲ ಬೀದಿಗಳಲ್ಲಿ ನಗರ ಪೊಲೀಸ್, ನಗರ ಸಂಚಾರ ಪೊಲೀಸ್ ಸಿ.ಸಿ.ಟಿ.ವಿ ಕ್ಯಾಮೆರಾ ಗಳು ಇವೆ. ಪ್ರತಿಷ್ಠಿತ ಪ್ರದೇಶ ಗಳಲ್ಲಿ ರಾತ್ರಿ ವೇಳೆಯಲ್ಲೂ ಜನರ ಮುಖವನ್ನು, ವಾಹನಗಳ ನೋಂದಣಿ ಫಲಕಗಳನ್ನು ಸ್ಪಷ್ಟವಾಗಿ ಸೆರೆಹಿಡಿಯಬಲ್ಲ, ವಿಡಿಯೊ ದಾಖಲಿಸಬಲ್ಲಂತಹ ಅತ್ಯಾಧುನಿಕ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ.
‘ನಮ್ಮಲ್ಲಿ ಅತ್ಯಾಧುನಿಕ ಕ್ಯಾಮೆರಾಗಳು ಇವೆ. ನಗರದ ಚಾಲುಕ್ಯ ವೃತ್ತದಲ್ಲಿ ನೀವು ನಿಂತಿದ್ದರೆ, ನಿಮ್ಮ ಕೈಗಡಿಯಾರದಲ್ಲಿನ ಸಮಯ ಎಷ್ಟು ಎಂಬುದನ್ನು ನಿಯಂತ್ರಣ ಕೊಠಡಿಯಲ್ಲಿ ಕೂತು ನೋಡಬಹುದಾದ ಸಾಮರ್ಥ್ಯದ ಕ್ಯಾಮೆರಾ ನಮ್ಮಲ್ಲಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಸದನದಲ್ಲಿ ಹಲವು ಬಾರಿ ಹೇಳಿದ್ದಾರೆ.
‘ಮಧುಬಲೆ’ ಯತ್ನದ ಬಗ್ಗೆ ಪ್ರತಿಕ್ರಿಯಿ ಸಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು, ‘ನನ್ನ ಮನೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲ. ಹೀಗಾಗಿ ಯಾವುದೇ ಸಾಕ್ಷ್ಯ ಇಲ್ಲ’ ಎಂದು ಹೇಳಿದ್ದರು. ಸಚಿವರ ಮನೆಗಳಿಗೆ ಇಂತಹ ಭದ್ರತೆ ಏಕಿಲ್ಲ ಎಂದು ‘ಪ್ರಜಾವಾಣಿ’ ಪರಿಶೀಲನೆ ನಡೆಸಿತು.
ಸಚಿವರ ಬಂಗಲೆಗಳ ನಿರ್ವಹಣೆ ಮಾಡುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಚಿವರಿಗೆ ಹಲವು ಬಾರಿ ಪ್ರಸ್ತಾವ ಸಲ್ಲಿಸಿದರೂ, ಯಾವ ಸಚಿವರೂ ಇದಕ್ಕೆ ಒಪ್ಪಿಗೆ ನೀಡಿಲ್ಲ. ಹೀಗಾಗಿ, ಅಳವಡಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಬಯಸದ ಅಧಿಕಾರಿಯೊಬ್ಬರು.
ಸಿ.ಎಂ ನಿವಾಸಕ್ಕೆ ಮಾತ್ರ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕಿದೆ. ಈ ಕಾರಣದಿಂದ ಸಿದ್ದರಾಮಯ್ಯ ಅವರ ಅಧಿಕೃತ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಕೆಲ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಕೆಲವು ಕ್ಯಾಮೆರಾಗಳನ್ನು ಮುಖ್ಯಮಂತ್ರಿ ಅವರೇ ವೈಯಕ್ತಿಕ ವೆಚ್ಚದಲ್ಲಿ ಹಾಕಿಸಿಕೊಂಡಿದ್ದಾರೆ.
ಉಳಿದಂತೆ ನಗರದ ಕೇಂದ್ರ ಭಾಗದ ವಿವಿಧೆಡೆ ಇರುವ ಸಚಿವರ ಅಧಿಕೃತ ನಿವಾಸಗಳಲ್ಲಿ, 12 ನಿವಾಸ
ಗಳನ್ನು ಪರಿಶೀಲಿಸಲಾಯಿತು. ವಿಧಾನಸಭಾಧ್ಯಕ್ಷ, ವಿಧಾನ ಪರಿಷತ್ ಸಭಾಪತಿ ಅವರ ಅಧಿಕೃತ ನಿವಾಸಗಳ ಹೊರಗೂ ಪರಿಶೀಲಿಸಲಾಯಿತು. ಯಾರ ಮನೆಗಳಲ್ಲೂ ಅಧಿಕೃತ ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲ. ಐವರು ಸಚಿವರು ಮಾತ್ರ ವೈಯಕ್ತಿಕವಾಗಿ ಇಂತಹ ಭದ್ರತಾ ವ್ಯವಸ್ಥೆ ಮಾಡಿಸಿಕೊಂಡಿದ್ದಾರೆ. ಆದರೆ ಆ ಕ್ಯಾಮೆರಾಗಳ ದೃಶ್ಯಾವಳಿಗಳು ಅವರ ನಿಯಂತ್ರಣದಲ್ಲೇ ಇರುತ್ತವೆ.
‘ಕೆಲವರು ಕ್ಯಾಮೆರಾ ಬೇಕು ಎಂದು ಹಾಕಿಸಿಕೊಳ್ಳುತ್ತಾರೆ. ಆದರೆ ಕ್ಯಾಮೆರಾ ದೃಶ್ಯಾವಳಿ ಅವರ ನಿಯಂತ್ರಣದಲ್ಲೇ ಇರುತ್ತದೆ. ಇನ್ನು ಅನೇಕರು ಕ್ಯಾಮೆರಾ ಹಾಕಿಸಿಕೊಳ್ಳುವುದೇ ಇಲ್ಲ. ಏನಾದರೂ ಅಚಾತುರ್ಯ ನಡೆದರೆ ಅದಕ್ಕೆ ಸಾಕ್ಷ್ಯಗಳೇ ಇರುವುದಿಲ್ಲ. ಮೊದಲಿನಿಂದಲೂ ಹೀಗೆಯೇ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಸಚಿವರ ಅಧಿಕೃತ ನಿವಾಸಗಳ ಸಿಬ್ಬಂದಿ.
ಕ್ಯಾಮೆರಾ ಕಣ್ಣಿಗೆ ವಿರೋಧವೇಕೆ?
‘ಸರ್ಕಾರದ ವತಿಯಿಂದ ಕ್ಯಾಮೆರಾ ಅಳವಡಿಸಿದರೆ, ಅದನ್ನು ನಿಯಂತ್ರಣ ಕೊಠಡಿಗೆ ಲಿಂಕ್ ಮಾಡಬೇಕಾಗುತ್ತದೆ. ಆಗ ದೃಶ್ಯಾವಳಿಗಳು ಸರ್ಕಾರದ ಸುಪರ್ದಿಗೆ ಬರುತ್ತವೆ. ಜತೆಗೆ ಅವುಗಳಿಗೆ ಮಾಹಿತಿ ಹಕ್ಕು ಕಾಯ್ದೆಯೂ ಅನ್ವಯವಾಗುತ್ತದೆ. ಈ ಕಾರಣಕ್ಕೆ ಹಲವು ಸಚಿವರು ಕ್ಯಾಮೆರಾ ಹಾಕಿಸಲು ವಿರೋಧ ವ್ಯಕ್ತಪಡಿಸುತ್ತಾರೆ’ ಎಂದು ಅಧಿಕಾರಿ ವಿವರಿಸಿದರು.
ಎಲ್ಲೆಲ್ಲಿದೆ, ಎಲ್ಲೆಲ್ಲಿಲ್ಲ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧಿಕೃತ ನಿವಾಸ, ಸಚಿವರಾದ ಸತೀಶ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಕೆ.ಜೆ.ಜಾರ್ಜ್ ಮತ್ತು ಲಕ್ಷ್ಮೀ ಹೆಬ್ಬಾಳಕರ ಮನೆಗಳಲ್ಲಿ ವೈಯಕ್ತಿಕವಾಗಿ ಹಾಕಿಸಿಕೊಂಡ ಕ್ಯಾಮೆರಾಗಳು ಇವೆ.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಸೆವೆನ್ ಮಿನಿಸ್ಟರ್ಸ್ ಹೌಸ್ ಸಮುಚ್ಚಯದಲ್ಲಿ ನೀಡಲಾಗಿರುವ ಅಧಿಕೃತ ನಿವಾಸದಲ್ಲಿ ಕ್ಯಾಮೆರಾಗಳು ಇಲ್ಲ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಯ ಕಾಂಪೌಂಡ್ ಮತ್ತು ಆವರಣದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಇಲ್ಲ.
ಸಚಿವರಾದ ಎಚ್.ಸಿ.ಮಹದೇವಪ್ಪ, ಈಶ್ವರ ಬಿ.ಖಂಡ್ರೆ, ಕೆ.ಎಚ್.ಮುನಿಯಪ್ಪ, ಎನ್.ಚಲುವರಾಯಸ್ವಾಮಿ, ಸಂತೋಷ್ ಲಾಡ್, ಎಂ.ಬಿ.ಪಾಟೀಲ, ಪ್ರಿಯಾಂಕ್ ಖರ್ಗೆ ಅವರ ಅಧಿಕೃತ ನಿವಾಸದ ಆವರಣದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಕಾಣಲಿಲ್ಲ.
ನಾಗರಿಕರ ಮೇಲೆ ಕ್ಯಾಮೆರಾ ಕಣ್ಗಾವಲು
*ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳು 7,500
*3,000 ಸ್ಥಳಗಳಲ್ಲಿ ಈ ಕ್ಯಾಮೆರಾಗಳು ಇದ್ದು, ಕೇಂದ್ರ ನಿಯಂತ್ರಣ ಕೊಠಡಿಗೆ ದೃಶ್ಯಾವಳಿಗಳನ್ನು ರವಾನಿಸುತ್ತವೆ
*890 ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳನ್ನು ಅಳವಡಿಸಲು ಗೃಹ ಇಲಾಖೆ ಕ್ರಮ ತೆಗೆದುಕೊಂಡಿದೆ
*500 ಎ.ಐ ಕ್ಯಾಮೆರಾ ಅಳವಡಿಕೆಗೆ ಗುರುತಿಸಲಾದ ಸ್ಥಳಗಳ ಸಂಖ್ಯೆ ಬಳಕೆ ಸ್ವರೂಪ
*ಈ ಮೊದಲು ನಗರದಲ್ಲಿ ಸಂಚಾರ ವ್ಯವಸ್ಥೆಯ ಮೇಲೆ ನಿಗಾ ಇರಿಸಲು ಸಿ.ಸಿ.ಟಿ.ವಿ ಕ್ಯಾಮೆರಾಗಳ ಬಳಕೆ
*ನಿರ್ಭಯಾ ಪ್ರಕರಣದ ನಂತರ ಮಹಿಳಾ ಸುರಕ್ಷತೆ ಕಾರಣಕ್ಕಾಗಿ ಎಲ್ಲ ರಸ್ತೆಗಳಲ್ಲಿ, ವೃತ್ತಗಳಲ್ಲಿ, ಜನವಿರಳ ಪ್ರದೇಶಗಳಲ್ಲಿ 7000ಕ್ಕೂ ಹೆಚ್ಚು ಕ್ಯಾಮೆರಾಗಳ ಅಳವಡಿಕೆ. ‘ನಿರ್ಭಯಾ’ ನಿಧಿ ಬಳಕೆ
*ಬಸ್ ನಿಲ್ದಾಣ, ಆಟೊ ನಿಲ್ದಾಣ, ಉದ್ಯಾನ, ಕ್ರೀಡಾಂಗಣ, ಶಾಲಾ–ಕಾಲೇಜುಗಳು ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಕ್ಯಾಮೆರಾ ಕಣ್ಗಾವಲು
*ಸುರಕ್ಷತೆ ದೃಷ್ಟಿಯಿಂದ ಮನೆ–ಅಂಗಡಿ, ಕಚೇರಿಗಳಲ್ಲೂ ಸಿಸಿಟಿವಿ ಕ್ಯಾಮೆರಾ ಬಳಕೆ ಮಾಡುತ್ತಿರುವ ಸಾರ್ವಜನಿಕರು
*ಪ್ರವೇಶ ದ್ವಾರ ಮತ್ತು ರಸ್ತೆಯತ್ತ ಮುಖಮಾಡಿಯೇ ಕ್ಯಾಮೆರಾಗಳ ಅಳವಡಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.