ADVERTISEMENT

ಚಿರತೆಗಳು ಕಾಡಿನಿಂದ ನಾಡಿಗೇಕೆ ಬರುತ್ತಿವೆ?

ಅರಣ್ಯ ಇಲಾಖೆ ಬಳಿಯೂ ಇಲ್ಲ ಉತ್ತರ; ವನ್ಯಜೀವಿ ತಜ್ಞರ ಸಲಹೆಗೂ ಹಿಂದೇಟು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಜನವರಿ 2019, 11:54 IST
Last Updated 28 ಜನವರಿ 2019, 11:54 IST
   

ಹೊಸಪೇಟೆ: ‘ಕಾಡು ಒತ್ತುವರಿ ಆಗುತ್ತಿದೆ. ಕಲ್ಲು ಗಣಿಗಾರಿಕೆ, ಕಾರ್ಖಾನೆಗಳು ಹೆಚ್ಚಾಗುತ್ತಿವೆ. ಕಾಡಿನಲ್ಲಿ ಚಿರತೆಗಳಿಗೆ ಆಹಾರ, ನೀರಿನ ಕೊರತೆ ಉಂಟಾಗಿದೆಯೋ? ಬೇಟೆಗಾರರ ಸಮಸ್ಯೆ ಹೆಚ್ಚಾಗಿದೆಯೋ ಎನ್ನುವುದನ್ನು ಪತ್ತೆ ಹಚ್ಚಿದರೆ ಚಿರತೆಗಳು ಕಾಡಿನಿಂದ ನಾಡಿಗೆ ಏಕೆ ಬರುತ್ತಿವೆ ಎಂದು ತಿಳಿಯಲು ಸಾಧ್ಯಎನ್ನುತ್ತಾರೆವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು.

ಕಾಡಿನಿಂದ ನಾಡಿಗೆ ಬಂದು ಚಿರತೆಗಳು ದಾಳಿ ನಡೆಸುತ್ತಿವೆ. ಆದರೆ, ಅದಕ್ಕೆ ನಿಖರ ಕಾರಣ ಏನೆಂಬುದು ಇದುವರೆಗೆ ಗೊತ್ತಾಗಿಲ್ಲ.

ಕಾಡಂಚಿನಲ್ಲಿ ಮೇಯಲು ಹೋಗುತ್ತಿದ್ದ ಕುರಿ, ಮೇಕೆ, ದನಗಳ ಮೇಲೆ ಚಿರತೆಗಳು ದಾಳಿ ನಡೆಸುವುದು ಸರ್ವೇ ಸಾಮಾನ್ಯ. ಈ ಹಿಂದೆ ಕೂಡ ದಾಳಿ ಮಾಡುತ್ತಿದ್ದವು. ಈಗಲೂ ಮುಂದುವರಿದಿದೆ. ಆದರೆ, ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಚಿರತೆಗಳು, ಇತ್ತೀಚಿನ ತಿಂಗಳಲ್ಲಿ ಅವುಗಳು ನಾಡಿಗೆ ಬಂದು ಮನುಷ್ಯರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.

ADVERTISEMENT

ಅದಕ್ಕೆ ಕಾರಣ ಏನೆಂದು ಕೇಳಿದರೆ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. ಕೇವಲ ಒಂದು ಅಂದಾಜು, ಊಹೆಯಷ್ಟೇ ಮಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಲಯ ಅರಣ್ಯ ಅಧಿಕಾರಿ ಎನ್‌. ಬಸವರಾಜ, ‘ಚಿರತೆಗಳ ಸಂತತಿ ಹೆಚ್ಚಾಗಿದೆ. ಗಣಿಗಾರಿಕೆ ನಿಂತು ಹೋದ ನಂತರ ಎಲ್ಲೆಡೆ ಮುಕ್ತವಾಗಿ ಓಡಾಡುತ್ತಿವೆ. ಜನವಸತಿ ಪ್ರದೇಶಗಳಿಗೂ ನುಗ್ಗುತ್ತಿವೆ’ ಎಂದರು. ಸಂತತಿ ಹೆಚ್ಚಾಗಿದೆ ಎಂದರೆ, ಈ ಹಿಂದೆ ಅವುಗಳ ಸಂಖ್ಯೆ ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ. ಮನುಷ್ಯರ ಮೇಲಿನ ದಾಳಿಗೆ ಕಾರಣವೇನು ಎಂದು ಕೇಳಿದರೆ ಅವರ ಬಳಿ ಯಾವುದೇ ಉತ್ತರವಿಲ್ಲ.

‘ಈ ಭಾಗದಲ್ಲಿ ಮೊದಲಿನಿಂದಲೂ ಚಿರತೆಗಳು ಇವೆ. ಆದರೆ, ಇಬ್ಬರು ಮಕ್ಕಳು ಸತ್ತ ನಂತರ ಹೆಚ್ಚು ಸುದ್ದಿಯಾಗಿದೆ' ಎನ್ನುತ್ತಾರೆ ಡಿ.ಎಫ್‌.ಒ. ರಮೇಶ ಕುಮಾರ.

‘ಗಣಿಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದಾಗಲೂ ಚಿರತೆಗಳ ಚಲನವಲನ ಇತ್ತು. ಆದರೆ, ನಾಡಿಗೆ ಲಗ್ಗೆ ಇಡುತ್ತಿರಲಿಲ್ಲ. ಈಗ ನಾಡಿಗೆ ಬಂದು ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ ಎಂದರೆ ಅವುಗಳಿಗೆ ಕಾಡಿನಲ್ಲಿ ಏನೋ ಸಮಸ್ಯೆ ಕಾಡುತ್ತಿದೆ ಎಂದರ್ಥ' ಎಂದು ತಿಳಿಸಿದರು.

‘ಪರಿಸರವಾದಿಗಳು, ವನ್ಯಜೀವಿ ತಜ್ಞರ ಸಭೆ ಕರೆದು, ಅವರ ಸಲಹೆ ಪಡೆದು ಅದನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಎಲ್ಲೋ ಒಂದು ಕಡೆ ಬೋನು ಇಟ್ಟು ಅವುಗಳನ್ನು ಸೆರೆ ಹಿಡಿಯುವುದು, ನಂತರ ಅದು ಬೇರೆಲ್ಲೊ ದಾಳಿ ನಡೆಸುವುದು ಹಾಗೆಯೇ ಮುಂದುವರಿಯುತ್ತದೆ’ ಎಂದರು.

‘ಸೆರೆ ಹಿಡಿದ ಚಿರತೆಗಳನ್ನು ಕೊಳ್ಳೇಗಾಲ, ಸಂಗಮದ ಕಾಡಿಗೆ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಪದೇ ಪದೇ ಚಿರತೆಗಳು ಒಂದೇ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ನೋಡಿದರೆ ಹಿಡಿದ ಚಿರತೆಗಳನ್ನು ಅದೇ ಭಾಗದಲ್ಲಿ ಬೇರೆಲ್ಲೋ ಬಿಡುತ್ತಿದ್ದಾರೇನೋ ಎಂಬ ಅನುಮಾನವೂ ಕಾಡುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ವನ್ಯಜೀವಿ ತಜ್ಞರೊಬ್ಬರು ಸಂಶಯ ವ್ಯಕ್ತಪಡಿಸಿದರು.

‘ಚಿರತೆಗಳು ಮೊದಲು ಯಾವ ಪ್ರದೇಶದಲ್ಲಿದ್ದವೋ ಅಲ್ಲಿಯೇ ಇರಲು ಇಷ್ಟಪಡುತ್ತವೆ. ಅವುಗಳನ್ನು ಆ ಪ್ರದೇಶದಿಂದ ಐದಾರೂ ಕಿ.ಮೀ ದೂರದ ಕಾಡಿಗೆ ಬಿಟ್ಟರೂ ಮತ್ತೆ ಪುನಃ ಅದೇ ಜಾಗಕ್ಕೆ ಬರುತ್ತವೆ. ಅಷ್ಟು ಜಾಣ ಪ್ರಾಣಿ ಚಿರತೆ’ ಎಂದರು.

ಪರಿಹಾರ:ಚಿರತೆ ದಾಳಿಯಿಂದ ಇತ್ತೀಚೆಗೆ ಮೃತರಾದ ಕುಟುಂಬದವರಿಗೆ ಅರಣ್ಯ ಇಲಾಖೆಯು ₹5 ಲಕ್ಷ ಪರಿಹಾರ ಕೊಟ್ಟಿದೆ. ಆದರೆ, ಇದುವರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಕೊಟ್ಟಿಲ್ಲ. ಶೀಘ್ರ ಪರಿಹಾರ ಕೊಡಬೇಕೆಂದು ಮೃತ ಕುಟುಂಬದವರು ಆಗ್ರಹಿಸುತ್ತಿದ್ದಾರೆ.ಅರಣ್ಯ ಇಲಾಖೆಯು ಪರಿಹಾರ ಧನವನ್ನು ₹5ರಿಂದ ₹10 ಲಕ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದೆ.

ಚಿರತೆ ದಾಳಿ ಶುರುವಾದದ್ದು
ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಕಂಪ್ಲಿ, ಸಂಡೂರು ಹಾಗೂ ಕೂಡ್ಲಿಗಿಯಲ್ಲಿ ಬೆಟ್ಟಗುಡ್ಡ, ಕುರುಚಲು ಕಾಡು ಯಥೇಚ್ಛವಾಗಿದೆ. ಅದು ಚಿರತೆ ಹಾಗೂ ಕರಡಿಗಳ ಆವಾಸಸ್ಥಾನಕ್ಕೆ ಹೇಳಿ ಮಾಡಿಸಿದ ಜಾಗ. ಹೀಗಾಗಿ ಅನೇಕ ವರ್ಷಗಳಿಂದ ಅವುಗಳ ಸಂತತಿ ಇಲ್ಲಿ ನೆಲೆಸಿದೆ.

ಹೀಗಿದ್ದರೂ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಟ್ಟು, ದಾಳಿ ನಡೆಸಿದ ನಿದರ್ಶನ ಇರಲಿಲ್ಲ.
ಆದರೆ, 1992ರಲ್ಲಿ ಮೊದಲ ಬಾರಿಗೆ ಸಂಡೂರಿನ ಶಂಕರ್‌ಗುಡ್ಡದಲ್ಲಿ ಚಿರತೆಯೊಂದು ದಾಳಿ ನಡೆಸಿ ಮಗುವನ್ನು ಕೊಂದು ಹಾಕಿತ್ತು. ಆಗ ಶಾರ್ಪ್‌ ಶೂಟರ್‌ ಒಬ್ಬರನ್ನು ಕರೆಸಿ ಚಿರತೆಯನ್ನು ಸಾಯಿಸಲಾಗಿತ್ತು. ಅದಾದ ನಂತರ 2016ರಲ್ಲಿ ಸಂಡೂರಿನಲ್ಲಿ ಚಿರತೆ ದಾಳಿ ನಡೆಸಿತ್ತು. ಅದನ್ನು ಹೊರತುಪಡಿಸಿದರೆ 2018ರ ಕೊನೆಯಲ್ಲಿ ಇಬ್ಬರು ಮಕ್ಕಳನ್ನು ಚಿರತೆ ಸಾಯಿಸಿದೆ.

‘1992ರಲ್ಲಿ ಆಗತಾನೇ ಸಂಡೂರಿನ ತೋರಣಗಲ್‌ ಬಳಿ ಜಿಂದಾಲ್‌ ಕಂಪನಿ ಸ್ಥಾಪನೆಯಾಗುತ್ತಿತ್ತು. ಬೆಟ್ಟಕ್ಕೆ ಹೊಂದಿಕೊಂಡಂತೆ ದೊಡ್ಡ ಕಾಂಪೌಂಡ್‌ ಕಟ್ಟಿದ್ದರು. ಆ ಭಾಗದಲ್ಲಿ ನೆಲೆಸಿದ್ದ ಚಿರತೆಗಳು ಬೇರೆ ಬೇರೆ ಭಾಗಕ್ಕೆ ಸ್ಥಳಾಂತರಗೊಂಡವು. ನಂತರ ಒಂದಾದ ನಂತರ ಒಂದು ಕಂಪನಿಗಳು ಬಂದವು. ಇದರಿಂದ ಚಿರತೆಗಳ ಆವಾಸಸ್ಥಾನಕ್ಕೆ ಧಕ್ಕೆಯಾಯಿತು. ಅಂದಿನಿಂದ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದವು’ ಎನ್ನುತ್ತಾರೆ ಸಮದ್ ಕೊಟ್ಟೂರು.

‘ಈ ಹಿಂದೆ ಮಾಂಸಾಹಾರಿಗಳ ಸಂಖ್ಯೆ ಕಡಿಮೆಯಿತ್ತು. ಅದೀಗ ಭಾರಿ ಹೆಚ್ಚಾಗಿದೆ. ಬೇಡಿಕೆ ಪೂರೈಸಲು ಕೋಳಿ ಫಾರಂಗಳ ಸಂಖ್ಯೆಯೂ ಜಾಸ್ತಿ ಆಗಿದೆ. ಸಹಜವಾಗಿಯೇ ಅದರ ಸುತ್ತ ನಾಯಿಗಳ ಸಂಖ್ಯೆಯೂ ದೊಡ್ಡದಾಗಿ ಬೆಳೆಯುತ್ತದೆ. ಅವುಗಳಿಂದ ಕೂಡ ಆಕರ್ಷಿತವಾಗಿ ಚಿರತೆಗಳು ಲಗ್ಗೆ ಇಡುತ್ತಿವೆ’ ಎಂದರು.

ಮುಂದೇನು?
‘ಯಾವುದು ನರಭಕ್ಷಕ ಚಿರತೆ ಎನ್ನುವುದನ್ನು ಮೊದಲು ಗುರುತಿಸುವ ಕೆಲಸ ಮಾಡಬೇಕು. ದಾಳಿಗಳು ಹೆಚ್ಚಾಗಿವೆ ಎಂದರೆ ಅವುಗಳ ಸಂತತಿ ಕೂಡ ಹೆಚ್ಚಾಗುತ್ತಿದೆ ಎಂದರ್ಥ. ಕಾಡಿನಲ್ಲಿ ಅವುಗಳಿಗೆ ಆಹಾರ ಸಿಗದ ಕಾರಣ ನಾಡಿಗೆ ಬಂದು ದಾಳಿ ನಡೆಸುತ್ತಿವೆ. ಸೆರೆಹಿಡಿದ ಚಿರತೆಗಳನ್ನು ಸಂರಕ್ಷಣಾ ಕೇಂದ್ರ ತೆರೆದು ಅದರಲ್ಲಿ ಇಡುವ ವ್ಯವಸ್ಥೆ ಮಾಡಬೇಕು' ಎಂದು ಪರಿಸರ ಹೋರಾಟಗಾರ ಶಿವಕುಮಾರ ಮಾಳಗಿ ಆಗ್ರಹಿಸಿದ್ದಾರೆ.

‘ಚಿರತೆಗಳ ಚಲನವಲನ ಅರಿಯಲು ವನ್ಯಜೀವಿ ತಜ್ಞರನ್ನು ಒಳಗೊಂಡ ಪ್ರತ್ಯೇಕವಾದ ಸಮಿತಿ ರಚಿಸಬೇಕು. ಅವರ ಸಲಹೆ ಮೇರೆಗೆ ವೈಜ್ಞಾನಿಕ ರೀತಿಯಲ್ಲಿ ಮುಂದುವರಿಯುವ ಅಗತ್ಯವಿದೆ’ ಎನ್ನುತ್ತಾರೆ ಸಮದ್‌ ಕೊಟ್ಟೂರು.

‘ಸೆರೆ ಹಿಡಿದ ಚಿರತೆಗಳಿಗೆ ರೇಡಿಯೊ ಕಾಲರ್‌ಗಳನ್ನು ಅಳವಡಿಸಿ ಕಾಡಿಗೆ ಬಿಡಬೇಕು. ಅವುಗಳ ಚಲನವಲನ ಅರಿಯಲು ಸಹಾಯವಾಗುತ್ತದೆ. ನಂತರ ಅವುಗಳ ಗಣತಿ ಕಾರ್ಯ ಆರಂಭಿಸಬೇಕು’ ಎಂದು ಸಲಹೆ ನೀಡಿದರು.

ಚಿರತೆ ಸಂತತಿ ವೃದ್ಧಿ ಕುರಿತು ನಿಖರ ಮಾಹಿತಿ ಇಲ್ಲ. ನಾಲ್ಕೈದು ತಿಂಗಳಲ್ಲಿ ಸರ್ವೇ ನಡೆಸಿ, ನಿಖರವಾದ ಮಾಹಿತಿ ಕಲೆ ಹಾಕಲಾಗುವುದು.
–ರಮೇಶ ಕುಮಾರ, ಡಿ.ಎಫ್‌.ಒ.

**

ಚಿರತೆಗಳನ್ನು ಮನುಷ್ಯನ ಶತ್ರುಗಳಂತೆ ಬಿಂಬಿಸಲಾಗುತ್ತಿದೆ. ಅದು ತಪ್ಪು. ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂರಕ್ಷಿಸಬೇಕು.
–ಸಮದ್‌ ಕೊಟ್ಟೂರು, ವನ್ಯಜೀವಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.