ADVERTISEMENT

ಕೈಗಾರಿಕೆಗೆ ಕೃಷಿ ಭೂಮಿ ಇನ್ನು ಸಲೀಸು? ಕಾಯ್ದೆಗೆ ತಿದ್ದುಪಡಿ

2 ಎಕರೆವರೆಗಿನ ಜಮೀನಿಗೆ ಭೂ ಪರಿವರ್ತನೆಯಿಂದ ವಿನಾಯಿತಿ: ಕಾಯ್ದೆಗೆ ತಿದ್ದುಪಡಿ

ರಾಜೇಶ್ ರೈ ಚಟ್ಲ
Published 12 ಡಿಸೆಂಬರ್ 2024, 0:41 IST
Last Updated 12 ಡಿಸೆಂಬರ್ 2024, 0:41 IST
   

ಬೆಂಗಳೂರು: ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಭೂಪರಿವರ್ತನೆ ಇಲ್ಲದೇ ಕೈಗಾರಿಕಾ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ. ಹೊಸ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಆಶಯದಿಂದ ಈ ಕ್ರಮ ಎನ್ನಲಾಗಿದೆ.

‌ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ಆಗುತ್ತಿದ್ದ ವಿಳಂಬದಿಂದಾಗಿ, ಬಂಡವಾಳ ಹೂಡುವವರು ಹಿಂದೇಟು ಹಾಕುತ್ತಿದ್ದರು. ಇದಕ್ಕೆ ಪರಿಹಾರ ಕಂಡು ಹಿಡಿಯಲು ಮುಂದಾದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್‌ 95ಕ್ಕೆ ಈ ತಿದ್ದುಪಡಿ ತರುವಂತೆ ಪ್ರಸ್ತಾವ ಸಲ್ಲಿಸಿತ್ತು.

ಇದರ ಅನ್ವಯ, ಕಾಯ್ದೆ ತಿದ್ದುಪಡಿಗೆ ಮಸೂದೆ ಸಿದ್ಧವಾಗಿದೆ. ಶುಕ್ರವಾರ (ಡಿ. 13) ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು, ಈಗ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವ ನವೋದ್ಯಮಿಗಳಿಗೆ ಪ್ರೋತ್ಸಾಹದಾಯಕ ಕ್ರಮಗಳನ್ನು ರಾಜ್ಯ ಸರ್ಕಾರ ಈ ಹಿಂದಿನ ಸಾಲಿನ (2023–24) ಬಜೆಟ್‌ನಲ್ಲಿ ಘೋಷಿಸಿತ್ತು. ಕೈಗಾರಿಕೆಗಳ ಸ್ಥಾಪನೆಗೆ ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಭೂ ಪರಿವರ್ತನೆಯ ಅಗತ್ಯ ಇಲ್ಲದೆ ಬಳಸಿಕೊಳ್ಳಲು ಅನುಕೂಲ ಆಗುವಂತೆ ವಿನಾಯಿತಿ ನೀಡಲು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು.

ತಹಶೀಲ್ದಾರ್‌ಗೆ ಅಧಿಕಾರ: ಇದೇ ಕಾಯ್ದೆಯ ಸೆಕ್ಷನ್ 67, 104 ಮತ್ತು 136 ಅನ್ನು ಕೂಡಾ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಜಾಗವನ್ನು ಯಾರಾದರು ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸುವ ಅಧಿಕಾರಕ್ಕೆ ಸಂಬಂಧಿಸಿದಂತೆ ಕಾಯ್ದೆಯ ಸೆಕ್ಷನ್ 67 ಮತ್ತು 104ರಲ್ಲಿ ವಿವರಿಸಲಾಗಿದೆ. ಸೆಕ್ಷನ್‌ 104ರ ಅಡಿ ನೋಟಿಸ್ ನೀಡಿರುವ ಹಲವು ಪ್ರಕರಣಗಳ ವಿರುದ್ಧ ವಿವಿಧ ಕೋರ್ಟ್‌ಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಹೀಗಾಗಿ ಈ ಎರಡೂ ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚು ಸ್ಪಷ್ಟತೆ ನೀಡಲು ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ.

ಮೇಲ್ಮನವಿ ಅರ್ಜಿಯೊಂದರಲ್ಲಿ ಕಾಯ್ದೆಯ ಸೆಕ್ಷನ್‌ 104 ಅನ್ನು ಸೆಕ್ಷನ್‌ 67ರ ಜೊತೆ ಪರಿಗಣಿಸಿ ಆದೇಶ ನೀಡಿರುವ ರಾಜ್ಯ ಹೈಕೋರ್ಟ್, ‘ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಮಾತ್ರ ನೋಟಿಸ್‌ ನೀಡಬಹುದು. ತಹಶೀಲ್ದಾರ್‌ ಅಲ್ಲ’ ಎಂದು ಹೇಳಿದೆ. ಹೀಗಾಗಿ, ಸೆಕ್ಷನ್‌ 104 ಬಗ್ಗೆ ಸ್ಪಷ್ಟತೆ ನೀಡುವ ಉದ್ದೇಶದಿಂದ ಕಾಯ್ದೆ ತಿದ್ದುಪಡಿಗೆ ಸರ್ಕಾರ‌ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಸೆಕ್ಷನ್‌ 67ರಲ್ಲಿ ಸ್ವತ್ತಿನ ಹಕ್ಕಿನ ಬಗ್ಗೆ ವಿವರಿಸಲಾಗಿದ್ದು, ಸಾರ್ವಜನಿಕ ರಸ್ತೆಗಳು, ಕೆರೆಗಳು ಹೀಗೆ ಸರ್ಕಾರಕ್ಕೆ ಸೇರಿದ ಜಾಗದ ಮೇಲೆ ಯಾರಾದರು ತಮ್ಮ ಹಕ್ಕು ಪ್ರತಿಪಾದಿಸಿದ್ದರೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾಧಿಕಾರಿ ದರ್ಜೆಗೆ ಕಡಿಮೆ ಇರದ ದರ್ಜೆಯ ಮೋಜಣಿ ಅಧಿಕಾರಿಯು ತನಿಖೆ ನಡೆಸಿ ತೀರ್ಮಾನ ತೆಗೆದುಕೊಂಡು ಆದೇಶ ಹೊರಡಿಸುವ ಅಧಿಕಾರ ನೀಡಲಾಗಿದೆ. ಆದರೆ, ಸೆಕ್ಷನ್‌ 104ರಲ್ಲಿ ಸರ್ಕಾರಿ ಜಾಗವನ್ನು ಅನಧಿಕೃತವಾಗಿ ಅಥವಾ ಅಕ್ರಮವಾಗಿ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದರೆ ನೋಟಿಸ್ ನೀಡಿ ಮುಟ್ಟುಗೋಲು ಹಾಕಿಕೊಳ್ಳಲು ತಹಶೀಲ್ದಾರ್‌ಗೆ ಅಧಿಕಾರ ನೀಡಲಾಗಿದೆ. ಎರಡೂ ಸೆಕ್ಷನ್‌ಗಳಲ್ಲಿರುವ ಈ ಅಂಶಗಳು ಗೊಂದಲಕ್ಕೆ ಕಾರಣವಾಗಿವೆ.

ಜಿಲ್ಲಾಧಿಕಾರಿಗಳಿಗೆ ಕೆಲಸದ ಹೆಚ್ಚಿನ ಹೊರೆ ಇರುವುದರಿಂದ ಪ್ರತಿಯೊಂದು ಒತ್ತುವರಿ ಪ್ರಕರಣಗಳನ್ನು ಗಮನಿಸಿ, ವಿಚಾರಣೆ ನಡೆಸಿ ಆದೇಶ ನೀಡಲು ಕಷ್ಟ. ಹೀಗಾಗಿ, ಸರ್ಕಾರಿ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ತಹಶೀಲ್ದಾರ್‌ಗೆ ವಹಿಸಲು ಈ ಎರಡು ಸೆಕ್ಷನ್‌ಗಳ ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಮೇಲ್ಮನವಿ ನ್ಯಾಯಮಂಡಳಿಗೆ ಅವಕಾಶ 

ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್‌ 136(3)ರ ಅಡಿ, ಆಸ್ತಿ ಪಾಲು, ಖರೀದಿ, ವಾರಸು, ಅಡಮಾನ, ದಾನ, ಗೇಣಿ ಮೂಲಕ ಹಕ್ಕುದಾರರ ಪರ ಜಿಲ್ಲಾಧಿಕಾರಿ ಮತ್ತು ವಿಶೇಷ ಜಿಲ್ಲಾಧಿಕಾರಿ ನೀಡುವ ಆದೇಶದ ವಿರುದ್ಧ ಅನೇಕರು ಹೈಕೋರ್ಟ್‌ ಮೆಟ್ಟಿಲೇರುತ್ತಾರೆ. ಆದರೆ, ಅರ್ಹತೆ ಮೇಲೆ ಪ್ರಕರಣವನ್ನು ಹೈಕೋರ್ಟ್ ತೀರ್ಮಾನಿಸಲು ಸಾಧ್ಯ ಇಲ್ಲ. ಹೀಗಾಗಿ, ಈ ಹಕ್ಕುದಾರರ ಪರ ನೀಡುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿಗಳನ್ನು ‘ಕರ್ನಾಟಕ ಕಂದಾಯ ಮೇಲ್ಮನವಿ ನ್ಯಾಯಮಂಡಳಿ’ಗೆ ಸಲ್ಲಿಸುವಂತೆ ಕಾಯ್ದೆ ತಿದ್ದುಪಡಿಗೂಪ್ರಸ್ತಾಪಿಸಲಾಗಿದೆ.

ನ್ಯಾಯಮಂಡಳಿಗೆ ಅರ್ಹತೆಯ ಮೇಲೆ ಪ್ರಕರಣಗಳನ್ನು ಪರಿಗಣಿಸಲು ಅವಕಾಶವಿದೆ. ಈ ತಿದ್ದುಪಡಿಯಿಂದ ಹೈಕೋರ್ಟ್‌ಗೆ ಇಂತಹ ಪ್ರಕರಣಗಳ ಭಾರ ಕೂಡಾ ಕಡಿಮೆ ಆಗಲಿದೆ. ಜೊತೆಗೆ ಸಂತ್ರಸ್ತರಿಗೆ ತಮ್ಮ ಅಹವಾಲುಗಳನ್ನು ಸಮರ್ಥವಾಗಿ ಮಂಡಿಸಲು ಅನುಕೂಲ ಆಗಲಿದೆ. ಈ ಕಾರಣಕ್ಕೆ ಕಾಯ್ದೆ ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.