ADVERTISEMENT

ಬಿಜೆಪಿ ಟಿಕೆಟ್ ಸಿಗದಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತೇನೆ: ರಾಜು ಕಾಗೆ

ಶಾಸಕರು ಬಂಡಾಯವೆದ್ದರೆ ಬಿಜೆಪಿ ಸರ್ಕಾರ ಪತನವಾಗುತ್ತದೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 13:00 IST
Last Updated 28 ಅಕ್ಟೋಬರ್ 2019, 13:00 IST
   

ಬೆಳಗಾವಿ: ‘ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಅದು ಅಥಣಿಯಲ್ಲಾದರೂ ಸರಿ, ಕಾಗವಾಡದಲ್ಲಾದರೂ ಸರಿ. ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತೇನೆ’ ಎಂದು ಬಿಜೆಪಿ ಮುಖಂಡ ಭರಮಗೌಡ (ರಾಜು) ಕಾಗೆ ತಿಳಿಸಿದರು.

ಕಾಗವಾಡ ತಾಲ್ಲೂಕು ಉಗಾರ ಬದ್ರುಕದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡರು ನಡೆಸಿದ ಸಭೆಗೆ ನಾನು ಹೋಗಲಿಲ್ಲ. ನನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೋಗಿದ್ದರು. ನನಗೆ ಟಿಕೆಟ್‌ಗಾಗಿ ಒತ್ತಡ ಹೇರಿದ್ದಾರೆ. ಆದರೆ, ಟಿಕೆಟ್ ಕೊಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಅಂತೆಯೇ ಅಥಣಿಯಿಂದ ಲಕ್ಷ್ಮಣ ಸವದಿ ಅವರಿಗೂ ಟಿಕೆಟ್ ಕೊಡೋಲ್ಲ ಎಂದಿದ್ದಾರೆ. ಇದು ಹೈಕಮಾಂಡ್ ನಿರ್ಧಾರ ಎಂದೂ ತಿಳಿಸಿದ್ದಾರೆ’ ಎಂದರು.

ADVERTISEMENT

‘ಯಾರಿಗೆ ಕೊಡುತ್ತೇವೆಯೋ ಅವರ ಪರ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇದು ಸರಿಯಾಗುವುದಿಲ್ಲ ಎಂದು ಕಾರ್ಯಕರ್ತರು ಹೇಳಿದರೂ ಕೇಳಿಸಿಕೊಂಡಿಲ್ಲ. ಹೀಗಾಗಿ, ನನ್ನೊಂದಿಗೆ ಕಾಂಗ್ರೆಸ್‌ನವರು ಸಂಪರ್ಕದಲ್ಲಿದ್ದಾರೆ. ನನ್ನ ಭವಿಷ್ಯವನ್ನು ನಾನು ನೋಡಿಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.

‘ಕಾಗವಾಡದ ಶ್ರೀಮಂತ ಪಾಟೀಲ ಅನರ್ಹರಾದಲ್ಲಿ ಕಾಗವಾಡದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಅಥಣಿಯಲ್ಲಿ ನಿಲ್ಲುತ್ತೇನೆ’ ಎಂದು ತಿಳಿಸಿದರು.

‘ಎರಡೂ ಕ್ಷೇತ್ರಗಳಲ್ಲೂ ನಾನು ಗೆಲ್ಲುವ ಕುದುರೆಯೇ. ನನ್ನಂತೆಯೇ ಲಕ್ಷ್ಮಣ ಸವದಿ ಕೂಡ ಪಕ್ಷಕ್ಕಾಗಿ ದುಡಿದಿಲ್ಲವೇ? ಉಪಮುಖ್ಯಮಂತ್ರಿ ಆಗಿರುವ ಅವರಿಗೂ ಟಿಕೆಟ್‌ ಕೊಡುವುದಿಲ್ಲವಲ್ಲ? ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟು, ತ್ಯಾಗ ಮಾಡಿದ್ದರಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎನ್ನುವುದು ಹೈಕಮಾಂಡ್ ಮನಸ್ಸಿನಲ್ಲಿರುವುದು ಇದಕ್ಕೆ ಕಾರಣ’ ಎಂದರು.

‘ಉಪಚುನಾವಣೆಯಲ್ಲಿ ಬಿಜೆಪಿ 8 ಸೀಟುಗಳನ್ನು ಗೆಲ್ಲದಿದ್ದರೆ ಅಥವಾ ಗೆದ್ದವರು ಬಂಡೆದ್ದರೆ ಈ ಸರ್ಕಾರ ಬಿದ್ದು ಹೋಗುತ್ತದೆ. ಹೀಗಾಗಿ ಕಾದು ನೋಡೋಣ’ ಎಂದು ಹೇಳಿದರು.

‘ಅನರ್ಹ ಶಾಸಕರಿಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಹಲವು ಆಶ್ವಾಸನೆ ಕೊಟ್ಟಿದ್ದಾರೆ. ನಿಮ್ಮನ್ನು ಮಂತ್ರಿ ಮಾಡುತ್ತೇವೆ ಹಾಗೂ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ’ ಎಂದರು.

‘ಅಥಣಿಯಲ್ಲಿ ಸ್ಪರ್ಧೆಗೆ ಲಕ್ಷ್ಮಣ ಸವದಿ ವಿರೋಧಿಸಿದರೆ ಏನು ಮಾಡುತ್ತೀರಿ’ ಎಂಬ ಪ್ರಶ್ನೆಗೆ, ‘ಇದು ರಾಜಕಾರಣ, ಏನೂ ಮಾಡಲಾಗದು. ನನ್ನ ಸೋದರನೇ ನನ್ನ ವಿರುದ್ಧ ಸ್ಪರ್ಧಿಸಿದ್ದರು. ಇಂದು ಗೆಳೆಯರಿದ್ದವರು ನಾಳೆ ವೈರಿಯಾಗಬಹುದು; ವೈರಿ ಇದ್ದವರು ಗೆಳೆಯರಾಗಬಹುದು. ಒಟ್ಟಿನಲ್ಲಿ ಸ್ಪರ್ಧೆಗೆ ಸಿದ್ಧವಿದ್ದೇನೆ’ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಗೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಈ ಸರ್ಕಾರ ನೀಡಿದ ‘ಕಾಡಾ’ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.