ADVERTISEMENT

ಒಬಿಸಿಗೆ ಅನ್ಯಾಯವಾಗಲು ಬಿಡಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:15 IST
Last Updated 24 ಡಿಸೆಂಬರ್ 2022, 22:15 IST
   

ತುಮಕೂರು: ಹಿಂದುಳಿದ ಜಾತಿ, ಸಮುದಾಯದವರಿಗೆ ಮೀಸಲಾತಿಯಲ್ಲಿ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲಿ ಶನಿವಾರ ಎಚ್ಚರಿಕೆ ನೀಡಿದರು.

ಜನತಾ ಪರಿವಾರದ ಮುಖಂಡ ಲಕ್ಷ್ಮಿನರಸಿಂಹಯ್ಯ ಸ್ಮರಣೆ ಹಾಗೂ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ 2–ಎ ಪ್ರವರ್ಗಕ್ಕೆ ಸೇರಿಸುವ ಸಂಬಂಧ ಡಿ. 29ರಂದು ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಹಿಂದೂ ಸಾದರ ಸಮುದಾಯದ ಮುಖಂಡ, ನಟ ‘ಮುಖ್ಯಮಂತ್ರಿ’ ಚಂದ್ರು ವಿರೋಧ ವ್ಯಕ್ತಪಡಿಸಿದರು. ಇದನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಹಿಂದುಳಿದವರಿಗೆ ಅನ್ಯಾಯವಾದರೆ ರಾಜಕೀಯ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ. ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದರು.

ADVERTISEMENT

‘ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ 102 ಜಾತಿಗಳಿದ್ದು, ಎಲ್ಲಾ ಸಮುದಾಯಕ್ಕೂ ಒಳಮೀಸಲಾತಿ ಕಲ್ಪಿಸಿದರೆ ತಮ್ಮದೇನೂ ತಕರಾರು ಇಲ್ಲ. ಒಳ ಮೀಸಲಾತಿ ಕೊಟ್ಟರೆ ಸಣ್ಣಪುಟ್ಟ ಸಮುದಾಯಗಳಿಗೂ ನ್ಯಾಯ ಸಿಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಗಳಿಗೂ ಮೀಸಲಾತಿ ಕಲ್ಪಿಸಬೇಕು’ ಎಂದು ಹೇಳಿದರು.

‘ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಯೆ ಶೇ 52ರಷ್ಟು ಇದ್ದು, ಶೇ 27ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಶೇ 4ರಷ್ಟು ಇರುವ ಮೇಲ್ವರ್ಗದ ಜನರಿಗೆ ಶೇ 10ರಷ್ಟು ಮೀಸಲಾತಿ ಕೊಡಲಾಗಿದೆ. ಬೇರೆ ರಾಜ್ಯಗಳಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ 50ರಷ್ಟು ದಾಟಿದರೆ ಅದನ್ನು ರದ್ದುಪಡಿಸುತ್ತಾರೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ನಿಯಮ ಮೀರಿ ಮೀಸಲಾತಿ ಪ್ರಮಾಣ ಹೆಚ್ಚಿಸುತ್ತಿದ್ದರೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ’ ಎಂದು ಟೀಕಿಸಿದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಮಯದಲ್ಲಿ ಮೀಸಲಾತಿ ವಿಚಾರದಲ್ಲಿ ಹಿಂದೂ ಸಾದರ ಸಮುದಾಯಕ್ಕೆ ಅನ್ಯಾಯ ಮಾಡಿದರು. ಲಿಂಗಾಯತ ಸಾದರಿಗೆ 2–ಎ ಜಾತಿ ಪ್ರಮಾಣ ಪತ್ರ ನೀಡಿ ಅನ್ಯಾಯವೆಸಗಿದರು’ ಎಂದು ‘ಮುಖ್ಯಮಂತ್ರಿ’ ಚಂದ್ರು ಆರೋಪಿಸಿದರು. ‘ಈಗ ನಮ್ಮ ಮೀಸಲಾತಿ ಕಿತ್ತುಕೊಂಡು ಬೇರೆಯವರಿಗೆ ಕೊಟ್ಟರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಪೈಲ್ವಾನರಿಗೇಕೆ ಊರುಗೋಲು’

‘ಅಂಗವಿಕಲರಿಗೆ, ಕಾಲು ಊನ ಇದ್ದವರಿಗೆ ಊರುಗೋಲು ಕೊಡುವುದು ಬಿಟ್ಟು ಪೈಲ್ವಾನರಿಗೆ ಕೊಡಲು ಹೊರಟಿದ್ದಾರೆ’ ಎಂದು ಹೇಳಿದ ಶಾಸಕ ಕೆ.ಆರ್.ರಮೇಶ್ ಕುಮಾರ್, ಪಂಚಮಸಾಲಿ ಸಮುದಾಯಕ್ಕೆ 2–ಎನಲ್ಲಿ ಮೀಸಲಾತಿ ಕಲ್ಪಿಸುವುದಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

‘ಪೈಲ್ವಾನರಿಗೆ ನಡೆಯಲು ಊರುಗೋಲು ಕೊಟ್ಟರೆ ಅದನ್ನು ನಡೆಯಲು ಬಳಸದೆ ಬೇರೆಯವರನ್ನು ಹೊಡೆಯಲು ಬಳಸುತ್ತಾರೆ. ಅಂತಹವರಿಗೆ ಮೀಸಲಾತಿ ಕೊಡಬೇಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.