ADVERTISEMENT

ದೇಗುಲಕ್ಕೆ ಹೋಗುವುದನ್ನು ನಿಲ್ಲಿಸುವಿರಾ: ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 20:45 IST
Last Updated 30 ಸೆಪ್ಟೆಂಬರ್ 2020, 20:45 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಸರ್ಕಾರದ ಅನುಮತಿ ಪಡೆಯದೇ ಅರಣ್ಯ ಭೂಮಿಯಲ್ಲಿ ನಿರ್ಮಿಸಿರುವ ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುವಿರಾ’ ಎಂದು ಅರ್ಜಿದಾರರನ್ನು ಹೈಕೋರ್ಟ್ ಪ್ರಶ್ನೆ ಮಾಡಿದೆ.

‘ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಗಿರಿಯಲ್ಲಿ ಶಿವಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಇದೆ. ಅದರೊಂದಿಗೆ ಈಗ ಹಲವು ಕಟ್ಟಡಗಳು ಈಗ ತಲೆ ಎತ್ತಿವೆ. ಎಲ್ಲವೂ ಸರ್ಕಾರಿ ಜಾಗದಲ್ಲೇ ಇವೆ’ ಎಂದು ತರಿಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ನಿವಾಸಿ ವೇಲುಮುರುಗನ್ ಅರ್ಜಿ ಸಲ್ಲಿಸಿದ್ದಾರೆ.

‘ಈ ದೇವಾಲಯವನ್ನು ಮಠಾಧೀಶರೊಬ್ಬರು ನಿರ್ವಹಿಸುತ್ತಿದ್ದರು. ವಾರ್ಷಿಕ ₹65 ಲಕ್ಷ ಆದಾಯ ಬರುತ್ತಿದೆ. ಮಠಾಧೀಶರು ಮೃತಪಟ್ಟ ನಂತರ ಅವರ ಮಕ್ಕಳು ಆಡಳಿತ ನಿರ್ವಹಿಸುತ್ತಿದ್ದಾರೆ. ಸುತ್ತಮುತ್ತಲ 20 ಎಕರೆ ಸರ್ಕಾರಿ ಜಾಗ ಒತ್ತುವರಿ ಮಾಡಿ ಕಲ್ಯಾಣ ಮಂಟಪ ಮತ್ತು ಅತಿಥಿ ಗೃಹಗಳನ್ನು ನಿರ್ಮಿಸಿದ್ದಾರೆ.ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆಯಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ADVERTISEMENT

ಅರ್ಜಿವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಸರ್ಕಾರಿ ಜಾಗದಲ್ಲಿ ದೇವಸ್ಥಾನ ಇದೆ ಎಂಬುದನ್ನು ಅರ್ಜಿದಾರರೇ ಹೇಳುತ್ತಿದ್ದಾರೆ. ದೇಗುಲದ ಭಕ್ತ ಎಂದು ಹೇಳಿಕೊಳ್ಳುವ ಅವರು ಅಲ್ಲಿಗೆ ಭೇಟಿ ನೀಡುವುದನ್ನು ನಿಲ್ಲಿಸುತ್ತಾರೆಯೇ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದು ಮೌಖಿಕವಾಗಿ ಕೇಳಿತು.

‘ಒತ್ತುವರಿಯಾಗಿದ್ದರೆತಹಶೀಲ್ದಾರ್ ವರದಿ ಆಧರಿಸಿ ನವೆಂಬರ್ 3ರೊಳಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, ‘ದೇವಾಲಯವನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸುವ ಮನವಿಯನ್ನು ಸರ್ಕಾರ ಪರಿಗಣಿಸಬಹುದು’ ಎಂದು ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.