ADVERTISEMENT

ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 18:32 IST
Last Updated 29 ಜನವರಿ 2019, 18:32 IST
ಭದ್ರಾವತಿ ನಿರ್ಮಲ ಆಸ್ಪತ್ರೆ ಮುಂಭಾಗ ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಮಂಗಳವಾರ ನಾಗರಿಕರು ಪ್ರತಿಭಟನೆ ನಡೆಸಿದರು.
ಭದ್ರಾವತಿ ನಿರ್ಮಲ ಆಸ್ಪತ್ರೆ ಮುಂಭಾಗ ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಮಂಗಳವಾರ ನಾಗರಿಕರು ಪ್ರತಿಭಟನೆ ನಡೆಸಿದರು.   

ಭದ್ರಾವತಿ: ಹೆರಿಗೆ ನಂತರ ಸಾವನ್ನಪ್ಪಿದ ಮಹಿಳೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡುವಲ್ಲಿ ಇಲ್ಲಿನ ನಿರ್ಮಲ ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನಾಗರಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಾರಂದೂರು ಗ್ರಾಮದ ರಾಧಾಬಾಯಿ (28) ಮೃತಪಟ್ಟವರು. ಈಕೆಯ ಹೆರಿಗೆ ಆಗುವ ತನಕ ಗಮನಿಸಿದ ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕಳುಹಿಸಿ ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದು ಆರೋಪಿಸಿ ನಡೆದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಆಸ್ಪತ್ರೆ ಕಿಟಿಕಿ ಗಾಜು ಒಡೆದ ಘಟನೆ ನಡೆದಿದೆ.

ಘಟನೆ ವಿವರ: ರಾಧಾಬಾಯಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದು, ಸಂಜೆ 7.45ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲಿನ ವೈದ್ಯರು ರಕ್ತ ಕೊರತೆ ಇದ್ದು ಇದನ್ನು ಹೊಂದಿಸುವಂತೆ ಸೂಚಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಕಾರಣ ಬೇರೆಡೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

ADVERTISEMENT

ರಾಧಾಬಾಯಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದು, ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಇದನ್ನು ದೃಢಪಡಿಸಿಕೊಂಡ ಕುಟುಂಬಸ್ಥರು ನೇರವಾಗಿ ಶವದ ಸಮೇತ ಮಂಗಳವಾರ ಸಂಜೆ ಆಸ್ಪತ್ರೆ ಮುಂಭಾಗ ಬಂದು ಪ್ರತಿಭಟಿಸಿದ್ದಾರೆ.

ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಪರಿಣಾಮ ಉದ್ರಿಕ್ತ ಗ್ರಾಮಸ್ಥರು ಆಸ್ಪತ್ರೆ ಕಿಟಿಕಿ ಗಾಜು ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಪೊಲೀಸರು ಬಿಗಿ ಬಂದೋಬಸ್ತು ಒದಗಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.