ADVERTISEMENT

ವಿಶ್ವ ಕ್ಯಾನ್ಸರ್‌ ದಿನ: ಒಂದೇ ವರ್ಷದಲ್ಲಿ 78,381 ಮಂದಿಗೆ ಕ್ಯಾನ್ಸರ್‌

ರಾಜ್ಯದಲ್ಲಿ ಉಲ್ಬಣಗೊಂಡ ಕ್ಯಾನ್ಸರ್‌ l ಆಸ್ಪತ್ರೆ ಚಿಕಿತ್ಸೆಗೆ ಅಡ್ಡಿಪಡಿಸಿದ ಕೋವಿಡ್

ವರುಣ ಹೆಗಡೆ
Published 3 ಫೆಬ್ರುವರಿ 2022, 19:47 IST
Last Updated 3 ಫೆಬ್ರುವರಿ 2022, 19:47 IST
ಡಾ.ಸಿ.ರಾಮಚಂದ್ರ
ಡಾ.ಸಿ.ರಾಮಚಂದ್ರ   

ಬೆಂಗಳೂರು: ರಾಜ್ಯದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿ ಪ್ರಕಾರ 2021ರ ಒಂದೇ ಸಾಲಿನಲ್ಲಿ 78,381 ಹೊಸ ಪ್ರಕರಣಗಳು ಪತ್ತೆಯಾಗಿವೆ. ತಪಾಸಣೆ ಪ್ರಮಾಣ ಹೆಚ್ಚಿದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕ್ಯಾನ್ಸರ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

2020ರಲ್ಲಿ ಹೊಸ ಪ್ರಕರಣಗಳ ಸಂಖ್ಯೆ 70 ಸಾವಿರದಷ್ಟಿತ್ತು. ಆರೋಗ್ಯ ಇಲಾಖೆಯು ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದ್ರೋಗ, ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮದಡಿ (ಎನ್‌ಪಿಸಿಡಿಸಿಎಸ್) ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. 30 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಪ್ರತಿ 5 ವರ್ಷಕ್ಕೆ ಒಂದು ಬಾರಿಯಂತೆ ಬಾಯಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್‌ಗೆ ತಪಾಸಣೆ ನಡೆಸಿ, ಚಿಕಿತ್ಸೆಗೆ ಒಳಪಡಿಸುತ್ತಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್‌ ಪ್ರಕರಣಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಲು ಸಾಧ್ಯವಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಈ ತಪಾಸಣೆ ಹಾಗೂ ಚಿಕಿತ್ಸೆಗೆ ಕೋವಿಡ್ ಅಡ್ಡಿಪಡಿಸಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಪೇಟ್ , ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಮಹಿಳೆಯರಲ್ಲಿ ಹೆಚ್ಚಿನವರು ಸ್ತನ ಕ್ಯಾನ್ಸರ್ ಎದುರಿಸುತ್ತಿದ್ದಾರೆ.
ಅದೇ ರೀತಿ, ಗರ್ಭಕಂಠ ಮತ್ತು ಗರ್ಭಕೋಶದ ಕ್ಯಾನ್ಸರ್ ಸಹ ಇರುವುದು ದೃಢಪಡುತ್ತಿದೆ. ರಾಜ್ಯದಲ್ಲಿ ಸದ್ಯ 2.3 ಲಕ್ಷ ಸಕ್ರಿಯ ಕ್ಯಾನ್ಸರ್ ಪ್ರಕರಣಗಳಿವೆ ಎಂದು ಇಲಾಖೆ ಅಂದಾಜಿಸಿದೆ.

ADVERTISEMENT

ಮಕ್ಕಳಲ್ಲೂ ಹೆಚ್ಚಳ:ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ದಾಖಲಾತಿ ಪ್ರಕಾರ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಪ್ರಕರಣಗಳೂ ಹೆಚ್ಚಳವಾಗುತ್ತಿವೆ. 14 ವರ್ಷದೊಳಗಿನವರಲ್ಲಿ ಲ್ಯುಕೇಮಿಯಾ ಮತ್ತು ಲಿಂಫೋಮಾ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಒಟ್ಟಾರೆ ಪ್ರಕರಣಗಳಲ್ಲಿ ಶೇ 7.9 ರಷ್ಟು ಈ ಮಾದರಿಯಕ್ಯಾನ್ಸರ್ ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಸರಾಸರಿ ಒಂದು ಲಕ್ಷ ಪುರುಷರಲ್ಲಿ 46 ಮಂದಿ ಹಾಗೂ ಮಹಿಳೆಯರಲ್ಲಿ 23 ಮಂದಿ ತಂಬಾಕು ಸಂಬಂಧಿತ ಕ್ಯಾನ್ಸರ್‌ಗೆ ಒಳಪಡುತ್ತಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಹಾಗೂ ಬೆಂಗಳೂರಿನ ರಾಷ್ಟ್ರೀಯ ರೋಗ ಮಾಹಿತಿಶಾಸ್ತ್ರ ಮತ್ತು ಸಂಶೋಧನಾ ಕೇಂದ್ರವು ಕ್ಯಾನ್ಸರ್ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿದೆ. ಈ ಸಂಸ್ಥೆಗಳು 2021ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ ರಾಜ್ಯದಲ್ಲಿ 2025ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳು ಶೇ 11 ರಷ್ಟು ಹೆಚ್ಚಳವಾಗಲಿವೆ. ಈ ಪ್ರಮಾಣ ಮಹಿಳೆಯರಲ್ಲಿ ಶೇ 11.6 ಹಾಗೂ ಪುರುಷರಲ್ಲಿ ಶೇ 11.4 ರಷ್ಟು ಅಧಿಕವಾಗಲಿದೆ ಎಂದು ಉಲ್ಲೇಖಿಸಲಾಗಿದೆ.

‘ಕ್ಯಾನ್ಸರ್ ಕಾಯಿಲೆ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ರೋಗಿಗಳು ಬೇಗ ತಪಾಸಣೆ ಮಾಡಿಸಿಕೊಂಡಲ್ಲಿ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯ. ’ ಎಂದು ಮಣಿಪಾಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ನಿಲೇಶ್ ರೆಡ್ಡಿ ತಿಳಿಸಿದರು.

ಆಸ್ಪತ್ರೆ ದಾಖಲಾತಿ ದಿಢೀರ್ ಹೆಚ್ಚಳ

ರಾಜ್ಯದಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಕ್ಯಾನ್ಸರ್ ಚಿಕಿತ್ಸೆಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಬರುವವರ ಸಂಖ್ಯೆ ಇಳಿಕೆ ಕಂಡಿತ್ತು. ಮೊದಲೆರಡು ಅಲೆಯಲ್ಲಿ ಸೋಂಕು ತೀವ್ರವಾಗಿ ಕಾಡಿದ್ದರಿಂದ ಸಂಸ್ಥೆಗೆ ಆ ವೇಳೆ ದಿನಕ್ಕೆ 250ರಿಂದ 400 ರೋಗಿಗಳು ಭೇಟಿ ನೀಡುತ್ತಿದ್ದರು. ಈಗ ಆ ಸಂಖ್ಯೆ 1,800ಕ್ಕೆ ಏರಿಕೆಯಾಗಿದೆ.ಸಂಸ್ಥೆಯಲ್ಲಿನ ಎಲ್ಲ 700 ಹಾಸಿಗೆಗಳೂ ಭರ್ತಿಯಾಗಿವೆ.

‘ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಅವಧಿಯಲ್ಲಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಇಳಿಕೆಯಾಗಿತ್ತು. ಈ ಅವಧಿಯಲ್ಲಿ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಲು ಗ್ರಾಮೀಣ ಪ್ರದೇಶದ ಜನರು ಅಷ್ಟಾಗಿ ಮುಂದೆ ಬರಲಿಲ್ಲ. ಈಗ ತಪಾಸಣೆಗೆ ಒಳಪಡುತ್ತಿರುವುದರಿಂದ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.