ADVERTISEMENT

ಮರ್ಯಾದೆಗೇಡು ಹತ್ಯೆ: ಕಠಿಣ ಕಾಯ್ದೆ ರೂಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 15:28 IST
Last Updated 25 ಡಿಸೆಂಬರ್ 2025, 15:28 IST
ಮರ್ಯಾದೆಗೇಡು ಹತ್ಯೆ
ಮರ್ಯಾದೆಗೇಡು ಹತ್ಯೆ   

ಬೆಂಗಳೂರು: ‘ಮರ್ಯಾದೆಗೇಡು ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಬೇಕು’ ಎಂದು ಲೇಖಕರು ಹಾಗೂ ಪತ್ರಕರ್ತರು ಆಗ್ರಹಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‍ಪತ್ರ ಬರೆದಿರುವ ಅವರು, ‘ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ಬಲಿಯಾದ ಮಾನ್ಯ ಅವರ ಹೆಸರಿನಲ್ಲಿ ಉಗ್ರ ಶಿಕ್ಷೆ ನೀಡುವ ಕಾಯ್ದೆ ರೂಪಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್ ಜಾತಿ ವಿವಾಹಗಳು ಪರಿಹಾರ ಎಂಬುದನ್ನು ಬಸವಣ್ಣನವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸುವ ಮೂಲಕ ಅದನ್ನು ಅನುಷ್ಠಾನ ಮಾಡುವಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ. 

ADVERTISEMENT

‘ಅಂತರ್ ಜಾತಿ ವಿವಾಹಗಳನ್ನು ಒಪ್ಪಲಾರದ ಜಾತೀಯತೆಯ ರೋಗಪೀಡಿತ ಮನಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ. ಇದು ಸಮಸಮಾಜ ನಿರ್ಮಿಸುವ ಪ್ರಯತ್ನಗಳನ್ನು ಹತ್ತಿಕ್ಕುತ್ತಿದೆ. ಅಂತರ್ ಜಾತಿ ವಿವಾಹಗಳಾದ ಮಕ್ಕಳನ್ನು ತಮ್ಮ ಪೋಷಕರೇ ಕಾನೂನಿನ ಭಯವಿಲ್ಲದೆ ಮರ್ಯಾದೆಯ ಹೆಸರಲ್ಲಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ, ಮೌಲ್ಯ ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ’ ಎಂದು ಹೇಳಿದ್ದಾರೆ. 

‘ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳು ಅಥವಾ ದಂಪತಿ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು ಘೋರ ಅಪರಾಧವೆಂದು ಪರಿಗಣಿಸಬೇಕು’ ಎಂದು ಒತ್ತಾಯಿಸಿ ವಿಜಯಮ್ಮ, ಜ್ಯೋತಿ ಅನಂತಸುಬ್ಬರಾವ್, ಸುನಂದಾ ಕಡಮೆ, ರೇಣುಕಾ ನಿಡಗುಂದಿ, ಪಿಚ್ಚಳ್ಳಿ ಶ್ರೀನಿವಾಸ್, ಭಾರತಿ ಹೆಗಡೆ, ಮಾಲತಿ ಭಟ್, ಮಹಾಂತೇಶ್ ಕೆ. ಸೇರಿದಂತೆ 100 ಕ್ಕೂ ಹೆಚ್ಚು ಮಂದಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.