ADVERTISEMENT

ಯಾದಗಿರಿ ವಿಜ್ಞಾನಿಯ ಮಾದರಿ ನಡೆ: ಕೋವಿಡ್-19 ಬಾಧಿತ ಸ್ಪೇನ್‌ನಲ್ಲೇ ಇರಲು ನಿರ್ಧಾರ

ಅವಿನಾಶ್ ಬಿ.
Published 24 ಮಾರ್ಚ್ 2020, 5:46 IST
Last Updated 24 ಮಾರ್ಚ್ 2020, 5:46 IST
ಕೋವಿಡ್-19 ಬಾಧಿತ ಬಾರ್ಸಿಲೋನದ ದೃಶ್ಯ
ಕೋವಿಡ್-19 ಬಾಧಿತ ಬಾರ್ಸಿಲೋನದ ದೃಶ್ಯ   

ಬೆಂಗಳೂರು: ಕೊರೊನಾ ವೈರಸ್ ಆಘಾತಕ್ಕೆ ಸಿಲುಕಿದ ದೇಶಗಳಲ್ಲಿ ಜಗತ್ತಿಗೇ ನಾಲ್ಕನೇ ಸ್ಥಾನದಲ್ಲಿರುವ ಸ್ಪೇನ್‌ನಲ್ಲಿ ಕನ್ನಡಿಗರೊಬ್ಬರು ತಮ್ಮ ಸಾಮಾಜಿಕ ಬದ್ಧತೆ ಪ್ರದರ್ಶಿಸಿದ್ದು, ಕೋವಿಡ್-19 ಸೋಂಕು ಪೀಡಿತ ಊರಿನಿಂದ ಸದ್ಯಕ್ಕೆ ಭಾರತಕ್ಕೆ ಬಾರದಿರಲು ನಿರ್ಧರಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಬಾರ್ಸಿಲೋನಾದಲ್ಲಿರುವ ಯಾದಗಿರಿ ಜಿಲ್ಲೆಯ ವಡಗೆರಾ ತಾಲೂಕಿನ ತುಮಕೂರು ಎಂಬಲ್ಲಿನ ನಿವಾಸಿ ಬಸವರಾಜ್ ಸಂಕೀನ್ ಎಂಬವರು ವಿದೇಶದಲ್ಲಿರುವ ಇತರ ಭಾರತೀಯರಿಗೆ ಮಾದರಿಯಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಎಂಎಸ್ ಅಧ್ಯಯನಕ್ಕಾಗಿ ತೆರಳಿದ್ದ ಅವರು, ನಂತರ ಎರಡು ವರ್ಷಗಳಿಂದ ಬಾರ್ಸಿಲೋನದ ಎಎಸ್‌ಟಿ ಆ್ಯಂಡ್ ಸೈನ್ಸ್ ಎಂಬ ಭೂಮಿಯ ಸಮೀಪದ ಕಕ್ಷೆಗಾಗಿ ಉಪಗ್ರಹಗಳನ್ನು ತಯಾರಿಸುತ್ತಿರುವ ಸಂಸ್ಥೆಯಲ್ಲಿ ಸಿಸ್ಟಂ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಪ್ರಜಾವಾಣಿಯು ಅವರನ್ನು ಸಂಪರ್ಕಿಸಿದಾಗ ಅಲ್ಲಿನ ಚಿಂತಾಜನಕ ಪರಿಸ್ಥಿತಿಯನ್ನು ಬಿಚ್ಚಿಟ್ಟ ಅವರು, ವಿಮಾನದ ಮೂಲಕ ತೆರಳುವವರ ಮೂಲಕವೇ ಈಗ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಇಲ್ಲೇ ಇರಲು ನಿರ್ಧರಿಸಿದ್ದೇನೆ ಎಂದರು.

ಯೂರೋಪ್ ಖಂಡದ ಕೋವಿಡ್ ಬಾಧಿತ ದೇಶಗಳಲ್ಲಿ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಸೋಮವಾರದವರೆಗೆ 33,089 ಮಂದಿ ಕೊರೊನಾ ಬಾಧಿತರಾಗಿದ್ದು, 2,355 ಮಂದಿ ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ ಮತ್ತು ಈಗಾಗಲೇ ಕೋವಿಡ್-19ನಿಂದಾಗಿ 2,182 ಮಂದಿ ಸಾವನ್ನಪ್ಪಿದ್ದಾರೆ.

ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಆದರೆ ಆಸ್ಪತ್ರೆಗಳು ಮತ್ತು ವೈದ್ಯರ ಪರಿಶ್ರಮದ ಫಲವಾಗಿ 3,355 ಮಂದಿ ಕೋವಿಡ್-19 ರೋಗಿಗಳು ಇದುವರೆಗೆ ಚೇತರಿಸಿಕೊಂಡಿದ್ದಾರೆ.

ದೇಶದಲ್ಲಿ ಮಾ.14ರಿಂದ ಆರೋಗ್ಯದ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ವೈರಸ್ ಮತ್ತಷ್ಟು ಪ್ರಸಾರವಾಗುವುದಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ ಎಂದಿರುವ ಬಸವರಾಜ್, ಅಗತ್ಯ ವಸ್ತು ಖರೀದಿಗೆ ಮಾತ್ರವೇ ಹೊರಬರಬೇಕು, ಇಲ್ಲದಿದ್ದರೆ ಎಲ್ಲರೂ ಮನೆಯೊಳಗೇ ಇರುವಂತೆ ಕಟ್ಟು ನಿಟ್ಟಿನ ಆದೇಶವಿದೆ ಎಂದಿದ್ದಾರೆ. ಲಾಕ್‌ಡೌನ್ ಅವಧಿಯಲ್ಲೂ ಸಾವಿನ ಸಂಖ್ಯೆ ಏರುತ್ತಿರುವುದರಿಂದ, ತುರ್ತು ಪರಿಸ್ಥಿತಿಯನ್ನು ಏಪ್ರಿಲ್ 11ರವರೆಗೆ ವಿಸ್ತರಿಸಲಾಗಿದ್ದು, ವಿಮಾನ ನಿಲ್ದಾಣಗಳು, ಬಂದರುಗಳನ್ನು ವೈರಾಣುಮುಕ್ತವಾಗಿಸುವ ಹಾಗೂ ಅನ್ಯ ಕಾರ್ಯಗಳಿಗೆ ಸೇನೆಯನ್ನು ಬಳಸಲಾಗುತ್ತಿದೆ ಎಂದವರು ಹೇಳಿದ್ದಾರೆ.

"ಸಹಜವಾಗಿ ಕೋವಿಡ್ ಆತಂಕ ಮೂಡಿಸಿರುವುದರಿಂದ ನಮ್ಮ ಮನೆಯಲ್ಲಿ ಭಾರತಕ್ಕೆ ವಾಪಸ್ ಬರುವಂತೆ ಒತ್ತಾಯಿಸುತ್ತಿದ್ದಾರೆ. ಈಗ ನಾನು ಸುರಕ್ಷಿತ ಸ್ಥಳದಲ್ಲಿದ್ದೇನೆ. ಊರಿಗೆ ಬರಬೇಕೆಂದರೆ ಸೋಂಕು ತಗುಲುವ ಸಾಧ್ಯತೆ ಮತ್ತು ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ನಾನು ಇಲ್ಲೇ ಇರಲು ತೀರ್ಮಾನಿಸಿದ್ದೇನೆ. ಇನ್ನೂ ಕೆಲವು ಕನ್ನಡಿಗರು ಇಲ್ಲಿದ್ದಾರೆ, ಅವರು ಕೂಡ ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ಹೋಗದಿರಲು ತೀರ್ಮಾನಿಸಿದ್ದಾರೆ" ಎಂದು ಬಸವರಾಜ್ ವಿವರಿಸಿದ್ದಾರೆ.

ಭಾರತದಲ್ಲಿನ ಸ್ಥಿತಿಯ ಬಗ್ಗೆ ನನಗೂ ಆತಂಕವಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಈ ಸೋಂಕು ಹರಡದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ ಎಂದಿರುವ ಅವರು, ಸರ್ಕಾರದ ಸೂಚನೆಗಳನ್ನೂ ಎಲ್ಲರೂ ಪಾಲಿಸುವಂತೆ ವಿನಂತಿಸಿದ್ದಾರೆ ಮತ್ತು ಕನ್ನಡಿಗರ ಸಹಿತ ಎಲ್ಲ ಭಾರತೀಯರು ಸುರಕ್ಷಿತರಾಗಿರಲಿ ಎಂದು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.