ADVERTISEMENT

ಯಶವಂತಪುರ-ಕಾರವಾರ-ವಾಸ್ಕೋ ಹೊಸ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 6:00 IST
Last Updated 7 ಮಾರ್ಚ್ 2020, 6:00 IST
ಯಶವಂತಪುರ–ಕಾರವಾರ–ವಾಸ್ಕೋ ಗಾಮಾ ಹೊಸ ರೈಲು ಮಹಿಳಾ ಚಾಲಕರಾಗಿ ಅಭಿರಾಮಿ ಹಾಗೂ ಬಾಲಾ ಶಿವಪಾರ್ವತಿ.
ಯಶವಂತಪುರ–ಕಾರವಾರ–ವಾಸ್ಕೋ ಗಾಮಾ ಹೊಸ ರೈಲು ಮಹಿಳಾ ಚಾಲಕರಾಗಿ ಅಭಿರಾಮಿ ಹಾಗೂ ಬಾಲಾ ಶಿವಪಾರ್ವತಿ.   

ಬೆಂಗಳೂರು: ಯಶವಂತಪುರ-ಕಾರವಾರ-ವಾಸ್ಕೋ ಹೊಸ ಎಕ್ಸ್‌ಪ್ರೆಸ್ ರೈಲು ಸೇವೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ‘ಯಶವಂತಪುರ-ಕಾರವಾರ-ವಾಸ್ಕೊ ಮಾರ್ಗದಲ್ಲಿ ಚಲಿಸುವ ಹೊಸ ರೈಲು ಚಾಲನೆ ಸಂತಸ ತಂದಿದೆ. ಶಿರಾಡಿ‌ಘಾಟ್ ಮೇಲಿನ ವಾಹನ ಸಂಚಾರ ಒತ್ತಡ ಇದರಿಂದ ಕಡಿಮೆಯಾಗಲಿದೆ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಸದಾ ಬೆಂಬಲ ನೀಡಲಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೊಸ ರೈಲುಗಳ ಸೇವೆ ಸಿಗಲಿದೆ’ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ 'ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಿಗೆ ರೈಲು ಸೇವೆ ದೊರೆತಿಲ್ಲ. ಕರಾವಳಿ ಭಾಗದ ಸಾಕಷ್ಟು ಜನ ಬೆಂಗಳೂರಿನಲ್ಲಿ ಇದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಕರಾವಳಿ ಜನರು ಟ್ಯಾಕ್ಸಿ ಮಾಡಿಕೊಂಡು ಊರಿಗೆ ಹೋಗುತ್ತಾರೆ. ಹೊಸ ರೈಲಿನಿಂದ ನಮ್ಮ ಭಾಗದ ಜನರ ನಿರೀಕ್ಷೆ ಈಗ ಈಡೇರಿದೆ. ಉಡುಪಿ, ಭಟ್ಕಳ, ಕಾರವಾರ ಮಾರ್ಗದಲ್ಲಿ ಈ ಹೊಸ ರೈಲು ಸಂಚರಿಸಲಿದೆ' ಎಂದು ಹೇಳಿದರು.

ADVERTISEMENT

'ಹೊಸ ರೈಲು ಸೇವೆ ಸಿಕ್ಕಿದೆ. ಹಾಗೆಂದ ಮಾತ್ರಕ್ಕೆ ಈ ಮಾರ್ಗದಲ್ಲಿ ಈಗಾಗಲೇ ಇರುವ ಹಳೆಯ‌ ರೈಲು ನಿಲ್ಲಿಸಬಾರದು. ಹಳೆಯ ರೈಲು ಸಂಚಾರ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

₹50 ಲಕ್ಷ ಕೋಟಿ ಹೂಡಿಕೆ

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ರೈಲು ಯೋಜನೆಗೆ ₹50ಲಕ್ಷ ಕೋಟಿ ಹೊಡಿಕೆಯಾಗಲಿ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

‘ಯಶವಂತಪುರ-ಕಾರವಾರ-ವಾಸ್ಕೋಗೆ ಹೊಸ ರೈಲು ಸೇವೆ ಆರಂಭಿಸಿದ್ದೇವೆ. ಇವತ್ತಿನ ಹೊಸ ರೈಲು ಚಾಲನೆ ಮಾಡಿದವರು ಇಬ್ಬರು ಮಹಿಳಾ ಲೋಕೊಪೈಲಟ್‌ಗಳು. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ‌ ಲೋಕೊಪೈಲಟ್‌ಗಳಿಂದ ರೈಲು ಚಾಲನೆ ಮಾಡಿರುವುದು ವಿಶೇಷ’ ಎಂದರು.

ರೈಲಿನ (16595) ವೇಳಾ ಪಟ್ಟಿ

ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು (16595) ಮರುದಿನ ಬೆಳಿಗ್ಗೆ 8.25ಕ್ಕೆ ಕಾರವಾರ ತಲುಪಲಿದೆ. ಬೆಳಿಗ್ಗೆ 8.30ಕ್ಕೆ ಕಾರವಾರದಿಂದ ತೆರಳುವ ರೈಲು ಬೆಳಿಗ್ಗೆ 10.30ಕ್ಕೆ ವಾಸ್ಕೋವನ್ನು ತಲುಪಲಿದೆ.

ಮಧ್ಯಾಹ್ನ 3.25 ಕ್ಕೆ ವಾಸ್ಕೋದಿಂದ ಹೊರಡುವ ರೈಲು ಸಂಜೆ 5.45 ಕ್ಕೆ ಕಾರವಾರ ತಲುಪಲಿದೆ. ಸಂಜೆ 6 ಗಂಟೆಗೆ ಕಾರವಾರದಿಂದ ತೆರಳುವ ರೈಲು ಬೆಳಿಗ್ಗೆ 8 ಗಂಟೆಗೆ ಯಶವಂತಪುರಕ್ಕೆ ತಲುಪಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.