ADVERTISEMENT

Karnataka BJP Rift: ಯತ್ನಾಳ ಹೊರದಬ್ಬಿದ ಬಿಜೆಪಿ

ವಿಜಯೇಂದ್ರ ವಿರುದ್ಧ ತೊಡೆತಟ್ಟಿದ್ದ ನಾಯಕ l ಪಕ್ಷದಿಂದ 6 ವರ್ಷ ಉಚ್ಚಾಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 0:30 IST
Last Updated 27 ಮಾರ್ಚ್ 2025, 0:30 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ನವದೆಹಲಿ: ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಹಾಗೂ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಿ ನಿರಂತರ ಟೀಕಾ ಪ್ರಹಾರ ನಡೆಸಿದ್ದ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳಿಗೆ ಉಚ್ಚಾಟನೆ ಮಾಡಲಾಗಿದೆ. ಆ ಮೂಲಕ ವಿಜಯೇಂದ್ರ ಅವರು ಮೇಲುಗೈ ಸಾಧಿಸಿದಂತಾಗಿದೆ. 

ಯಡಿಯೂರಪ್ಪ ಕುಟುಂಬ ಭ್ರಷ್ಟಾ ಚಾರ, ಹೊಂದಾಣಿಕೆ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿ ಯತ್ನಾಳ ಅವರು ಕಳೆದೊಂದು ವರ್ಷದಿಂದ ವಾಚಾಮ ಗೋಚರವಾಗಿ ಬೈದಿದ್ದರು. ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಬಾರದು ಎಂದು ಪಟ್ಟು ಹಿಡಿದಿದ್ದರು. ರಾಜ್ಯ ಘಟಕದ ಅಧ್ಯಕ್ಷರ ವಿರುದ್ಧ ದೂರು ಸಲ್ಲಿಸಲು ವರಿಷ್ಠರ ಭೇಟಿಗೆ ಪ್ರಯತ್ನ ಪಟ್ಟಿದ್ದರೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

ADVERTISEMENT

ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಕಾರಣಕ್ಕೆ ಲಿಂಗಾಯತ ನಾಯಕ ಯತ್ನಾಳ ಅವರಿಗೆ ಪಕ್ಷವು ಕೆಲವೇ ದಿನಗಳ ಅಂತರದಲ್ಲಿ ಎರಡು ಬಾರಿ ಶೋಕಾಸ್‌ ನೋಟಿಸ್ ನೀಡಿತ್ತು. ಪಕ್ಷದ ಕೇಂದ್ರ ಶಿಸ್ತು ಸಮಿತಿಯು ಫೆಬ್ರುವರಿ 10ರಂದು ನೀಡಿದ್ದ ಶೋಕಾಸ್‌ ನೋಟಿಸ್‌ಗೆ ಯತ್ನಾಳ ಅವರು ಮರುದಿನವೇ ಉತ್ತರ ನೀಡಿದ್ದರು. ಆ ಬಳಿಕ ಅವರ ಬಣದ ಹೆಚ್ಚಿನ ನಾಯಕರು ಮೌನಕ್ಕೆ ಶರಣಾಗಿದ್ದರು. ಆದರೆ, ಯತ್ನಾಳ ಅವರು ವಿಜಯೇಂದ್ರ ವಿರುದ್ಧ ಟೀಕೆ ಮುಂದುವರಿಸಿದ್ದರು. ಈ ಭಿನ್ನರ ಬಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಜಯೇಂದ್ರ ಅವರು ವರಿಷ್ಠರ ಮೊರೆ ಹೋಗಿದ್ದರು. ವರಿಷ್ಠರನ್ನು ಮೂರು–ನಾಲ್ಕು ಭೇಟಿ ಮಾಡಿ ದೂರು ನೀಡಿದ್ದರು. 

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಬುಧವಾರ ಸಂಜೆ ಭೇಟಿ ಮಾಡಿ ಪುತ್ರ ಬಿ.ಆರ್. ಸುಭಾಷ್‌ ವಿವಾಹಕ್ಕೆ ಆಮಂತ್ರಣ ನೀಡಿದರು. ಈ ವೇಳೆ, ವಿಜಯೇಂದ್ರ ಜತೆಗಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲೇ, ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಆದೇಶ ಹೊರಡಿಸಿದರು. 

‘ಫೆಬ್ರುವರಿ 10ರಂದು ಶೋಕಾಸ್‌ ನೋಟಿಸ್‌ಗೆ ನೀವು ನೀಡಿರುವ ಪ್ರತಿಕ್ರಿಯೆಯನ್ನು ಶಿಸ್ತು ಸಮಿತಿ ಪರಿಗಣಿಸಿದೆ. ಉತ್ತಮ ನಡವಳಿಕೆ ತೋರುವುದಾಗಿ ಉತ್ತರ ನೀಡಿದ್ದೀರಿ. ಆದರೆ, ನಡವಳಿಕೆ ಬದಲಾಗಿಲ್ಲ. ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ. 

ಒಂದೂವರೆ ವರ್ಷದಿಂದ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದ ಭಿನ್ನಮತೀಯ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಶಿವರಾಮ ಹೆಬ್ಬಾರ, ಯತ್ನಾಳ ಬಣದ ಶಾಸಕ ಬಿ.ಪಿ.ಹರೀಶ್‌ ಹಾಗೂ ವಿಜಯೇಂದ್ರ ಬಣದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೇಂದ್ರ ಶಿಸ್ತು ಸಮಿತಿಯು ಮಂಗಳವಾರ ಷೋಕಾಸ್‌ ನೋಟಿಸ್‌ ನೀಡಿತ್ತು. ಈ ಮೂಲಕ, ರಾಜ್ಯ ಘಟಕದಲ್ಲಿನ ಬಣ ಬಡಿದಾಟ ನಿಯಂತ್ರಣಕ್ಕೆ ವರಿಷ್ಠರು ಮುಂದಾಗಿದ್ದಾರೆ.

ಸತ್ಯವಂತರಿಗಿದು ಕಾಲವಲ್ಲ ದುಷ್ಟರಿಗೆ ಸುಭಿಕ್ಷಕಾಲ: ಯತ್ನಾಳ

ಬೆಂಗಳೂರು: ‘ಪಕ್ಷದೊಳಗಿನ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಮಾತನಾಡಿದ ಕಾರಣಕ್ಕೆ ಸಿಕ್ಕ ಪ್ರತಿಫಲವಿದು’ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ತಮ್ಮನ್ನು ಪಕ್ಷದಿಂದ ಆರು ವರ್ಷ ಅವಧಿಗೆ ಉಚ್ಚಾಟಿಸಿರುವ ಕುರಿತು ‘ಎಕ್ಸ್‌’ನಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ‘ಪಕ್ಷದಲ್ಲಿ ಏಕವ್ಯಕ್ತಿಯ ಆಧಿಪತ್ಯ ವನ್ನು ತೊಡೆದು ಹಾಕುವುದಕ್ಕಾಗಿ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೋರಾಟ ನಡೆಸಿದ್ದ
ಕ್ಕಾಗಿ ಹಾಗೂ ಇದ್ದದ್ದನ್ನು ಇದ್ದ ಹಾಗೇ ಹೇಳಿದ್ದಕ್ಕಾಗಿ ನನಗೆ ಉಚ್ಚಾಟನೆಯ ಬಹುಮಾನ ನೀಡಿದ್ದಾರೆ. ಸ್ಥಾಪಿತ ಹಿತಾಸಕ್ತಿಗಳು ಅವರ ಕಾರ್ಯಸೂಚಿಯನ್ನು ಯಶಸ್ವಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ’ ಎಂದು ಅವರು ಹೇಳಿದ್ದಾರೆ. ‘ಸತ್ಯವಂತರಿಗಿದು ಕಾಲ ವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಉಪಕಾರ ಮಾಡಿದರೆ ಅಪಕರಿಸುವ ಕಾಲ. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ. ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ; ಸತ್ಯವಂತರಿಗಿದು ಕಾಲವಲ್ಲ’ ಎಂದು ಯತ್ನಾಳ ಅವರು ಪುರಂದರದಾಸರ ಪದಗಳನ್ನು ಸ್ಮರಿಸಿದ್ದಾರೆ.

‘ನನ್ನನ್ನು ಉಚ್ಚಾಟನೆ ಮಾಡಿದ್ದರೂ ಭ್ರಷ್ಟಾಚಾರ, ಕುಟುಂಬ ರಾಜಕಾರಣ ವಿರುದ್ಧ, ಉತ್ತರ ಕರ್ನಾಟಕ ಮತ್ತು ಹಿಂದುತ್ವದ ಪರ ಹೋರಾಟದಿಂದ ವಿಮುಖನಾಗುವುದಿಲ್ಲ. ಹಿಂದಿನ ಹುರುಪು ಮತ್ತು ಅದೇ ದೃಢತೆಯಿಂದ ಜನರ ಸೇವೆಯನ್ನು ಮುಂದುವರಿಸುತ್ತೇನೆ. ನನ್ನ ಹೋರಾಟದ ಜತೆ ನಿಂತ ಎಲ್ಲ ಕಾರ್ಯಕರ್ತರು, ಸ್ನೇಹಿತರು, ಸ್ವಾಮೀಜಿಗಳಿಗೂ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.

ಈ ಕ್ರಮ ದುರದೃಷ್ಟಕರವೆಂದು ದುಃಖಿಸುವೆ, ಸಂಭ್ರಮ ಬೇಡ: ವಿಜಯೇಂದ್ರ

‘ಬಸನಗೌಡ ಪಾಟೀಲ ಯತ್ನಾಳ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ–ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿ ರುವ ಕ್ರಮ. ಈ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ. ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಅಶಿಸ್ತಿನ ವಿರುದ್ಧ ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರವನ್ನು ಯಾರೂ ಸಂಭ್ರಮಿಸುವುದು ಬೇಡ. ಶಿಸ್ತುಬದ್ಧ ಸಂಘಟನೆಯ ವ್ಯವಸ್ಥೆಯಲ್ಲಿರುವ ನಾವು ಪಕ್ಷದ ವರಿಷ್ಠರ ನಿರ್ಧಾರವನ್ನು ಗೌರವಿಸಿ, ಮುಂಬರುವ ದಿನಗಳಲ್ಲಿ ಪಕ್ಷ ಕಟ್ಟುವತ್ತ ಹಾಗೂ ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್
ಸರ್ಕಾರದ ವಿರುದ್ಧ ಕೈಗೊಳ್ಳಬೇಕಿರುವ ಹೋರಾಟಗಳತ್ತ ಒಗ್ಗಟ್ಟಿನ ಸಂಕಲ್ಪ ತೊಟ್ಟು ಮುನ್ನಡೆಯೋಣ’ ಎಂದಿದ್ದಾರೆ.

‘ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ. ನನ್ನ ತಂದೆ ಯಡಿಯೂರಪ್ಪನವರು ಎಲ್ಲರನ್ನೂ ಸಮಚಿತ್ತ ಭಾವದಿಂದ ನೋಡಿ, ಪಕ್ಷವನ್ನು ಕುಟುಂಬದಂತೆ ಬೆಳೆಸಿದ ಮಾದರಿಯಲ್ಲಿಯೇ ನಡೆಯಬೇಕೆಂಬ ಸಂಕಲ್ಪ ಹೊತ್ತು, ಸಂಘದ ಹಿರಿಯರು ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ’ ಎಂದಿದ್ದಾರೆ.

‘ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ. ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ. ಸಮರ್ಪಣೆ– ತ್ಯಾಗ ಪಾಠವನ್ನು ಹೇಳಿಕೊಡುವ ಸಂಸ್ಕಾರವಂತ ಸಂಘಟನೆಯ ವ್ಯವಸ್ಥೆಯಲ್ಲಿ ಬೆಳೆದು ಬಂದ ನಾನು ಸಹನೆ– ತಾಳ್ಮೆಯನ್ನು ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಆಧಾರಸ್ತಂಭವೆಂದು ಪರಿಗಣಿಸಿ ಮುನ್ನಡೆದಿದ್ದೇನೆ’ ಎಂದಿದ್ದಾರೆ.

‘ಭವಿಷ್ಯದಲ್ಲಿಯೂ ನಾನು ನಡೆಯುವ ಹಾದಿಯಲ್ಲಿ ಎಲ್ಲಾದರೂ ಎಡವಿದರೆ, ಅದನ್ನು ತಿದ್ದಿ ತೀಡುವ ಅಧಿಕಾರ ಪಕ್ಷದ ಹಿರಿಯರೆಲ್ಲರಿಗೂ ಇದ್ದೇ ಇದೆ. ಎಲ್ಲರೂ ಸೇರಿ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಿ ಪಕ್ಷವನ್ನು ಮುನ್ನಡೆಸೋಣ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಮೂರನೇ ಬಾರಿ ಉಚ್ಚಾಟನೆ 

ಬಿಜೆಪಿಯಿಂದ ಯತ್ನಾಳ ಉಚ್ಚಾಟನೆ ಆಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಎರಡು ಬಾರಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇರೆಗೆ ಪಕ್ಷದಿಂದ ಉಚ್ಚಾಟನೆಯಾಗಿ, ಮರಳಿ ಬಿಜೆಪಿಗೆ ಬಂದಿದ್ದರು.

2009ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಕಾರಣಕ್ಕೆ ಪ್ರಥಮ ಬಾರಿಗೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. 2014ರಲ್ಲಿ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. 

2016ರಲ್ಲಿ ವಿಜಯಪುರ–ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆಗ ಪಕ್ಷವು ಜಿ.ಎಸ್‌. ನ್ಯಾಮಗೌಡ ಅವರಿಗೆ ಟಿಕೆಟ್‌ ನೀಡಿತ್ತು. ಯತ್ನಾಳ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರನ್ನು ಉಚ್ಚಾಟಿಸಲಾಗಿತ್ತು. 2018ರಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದೀಗ, ಮೂರನೇ ಬಾರಿ ಉಚ್ಚಾಟನೆಗೊಂಡಿದ್ದಾರೆ. 

ವರಿಷ್ಠರೊಂದಿಗೆ ಚರ್ಚೆ: ಬೊಮ್ಮಾಯಿ

ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಣಯವನ್ನು ನಾವೆಲ್ಲರೂ ಪಾಲಿಸಬೇಕಾಗುತ್ತದೆ. ಭವಿಷ್ಯದಲ್ಲಿ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಾಗದ ರೀತಿಯಲ್ಲಿ ನಾವು ನಡೆದುಕೊಳ್ಳಬೇಕಿದೆ. ಯತ್ನಾಳ ವಿಷಯದ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿ ಮಾತನಾಡುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಕರ್ನಾಟಕದ ವಿಚಾರದಲ್ಲಿ ವರಿಷ್ಠರು ಒಂದು ವರ್ಷದಿಂದ ಎಲ್ಲರನ್ನು ಕರೆದು ಮಾತನಾಡಿಸಿ ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ. ಶಿಸ್ತು ಮುಖ್ಯ ಎಂಬ ಕಾರಣಕ್ಕೆ ಕೆಲವರಿಗೆ ನೋಟಿಸ್ ಕೊಟ್ಟಿದ್ದಾರೆ. ಹಲವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.