ನವದೆಹಲಿ:ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಪಕ್ಷದ ಭಿನ್ನಮತೀಯ ನಾಯಕರು ಬುಧವಾರ ಇಲ್ಲಿ ಸಭೆ ಸೇರಿ ಮುಂದಿನ ಹೋರಾಟದ ರಣತಂತ್ರ ರೂಪಿಸಿದರು. ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಮಹದಾಸೆಗೆ ಫಲ ಸಿಗಲಿಲ್ಲ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಮತ್ತಿತರ ನಾಯಕರು ಕರ್ನಾಟಕ ಭವನದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದರು. ಬಳಿಕ, ಈ ನಾಯಕರು ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಬೊಮ್ಮಾಯಿ ಅವರು ತಟಸ್ಥ ಬಣದಲ್ಲಿ ಈವರೆಗೆ ಗುರುತಿಸಿಕೊಂಡಿದ್ದರು. ವಿಜಯೇಂದ್ರ ಅವರನ್ನು ಅಧ್ಯಕ್ಷ
ರನ್ನಾಗಿ ಮುಂದುವರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
‘ಯಡಿಯೂರಪ್ಪ ಬಳಿ ನಾನೇ ಲಿಂಗಾಯತ ನಾಯಕ ಎಂದು ವಿಜಯೇಂದ್ರ ಬಿಂಬಿಸಿಕೊಳ್ಳುತ್ತಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರೆ 2028ರಲ್ಲಿ ಮುಖ್ಯಮಂತ್ರಿಯಾಗಬಹುದು ಎಂದೂ ಲೆಕ್ಕಾಚಾರ ಹಾಕಿದ್ದಾರೆ. ಅದಕ್ಕಾಗಿ ಗುಣಾಕಾರ, ಭಾಗಾಕಾರ ನಡೆಸಿ ಪಕ್ಷದ ಹಿರಿಯ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ವಿಜಯೇಂದ್ರ ವಿರುದ್ಧ ಲಿಂಗಾಯತ ನಾಯಕರೆಲ್ಲ ಒಟ್ಟಾಗಿ ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನಿಸಬೇಕು’ ಎಂಬ ನಿಲುವಿಗೆ ತಟಸ್ಥ– ಭಿನ್ನಮತೀಯ ನಾಯಕರು ಬಂದರು ಎಂದು ಮೂಲಗಳು ತಿಳಿಸಿವೆ.
‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರನ್ನು ಕುಮಾರ್ ಬಂಗಾರಪ್ಪ ಅವರು ಭೇಟಿ ಮಾಡಿ ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ದೂರು ಸಲ್ಲಿಸಿದ್ದಾರೆ. ಲಿಂಗಾಯತ ಸಮುದಾಯದ ನಾಯಕರೆಲ್ಲ ವರಿಷ್ಠರನ್ನು ಭೇಟಿ ಮಾಡಿ ನಿಲುವು ತಿಳಿಸಬೇಕು. ಅದಕ್ಕೂ ಮುನ್ನ, ಲಿಂಗಾಯತ ಸಂಸದರು ಹಾಗೂ ಶಾಸಕರು ಸಭೆ ನಡೆಸಿ ವಿಜಯೇಂದ್ರ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ಒಮ್ಮತಕ್ಕೆ ಬಂದಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ನಿವಾಸದಲ್ಲಿ ಇದೇ 10ರಂದು ಸಭೆ ನಡೆಸುವ ಕುರಿತು ಚರ್ಚೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ನನಗೆ ಹಂಚಿಕೆಯಾಗಿರುವ ಸಂಸದರ ನಿವಾಸಕ್ಕೆ ಇದೇ 10ರಂದು ಸ್ಥಳಾಂತರಗೊಳ್ಳಲಿದ್ದೇನೆ. ಅಂದು ಪೂಜೆ ಇಟ್ಟುಕೊಂಡಿದ್ದೇವೆ. ಬಿ.ವೈ. ರಾಘವೇಂದ್ರ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ 19 ಸಂಸದರನ್ನು ಆಹ್ವಾನಿಸಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ನಾನು ಯಾವುದೇ ಬಣದಲ್ಲಿ ಗುರುತಿಸಿಕೊಂಡಿಲ್ಲ’ ಎಂದು ವಿ.ಸೋಮಣ್ಣ ಸ್ಪಷ್ಟಪಡಿಸಿದರು.
ಜೆ.ಪಿ.ನಡ್ಡಾ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸಬೇಕು ಎಂದು ಭಿನ್ನಮತೀಯ ನಾಯಕರು ಬಹಳ ಪ್ರಯತ್ನ ಪಟ್ಟರು. ಆದರೆ, ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ.
‘ಪಕ್ಷದ ವರಿಷ್ಠರು ದೆಹಲಿ ವಿಧಾನಸಭಾ ಚುನಾವಣೆ ಹಾಗೂ ಸಂಸತ್ ಕಲಾಪದಲ್ಲಿ ನಿರತರಾಗಿರುವುದರಿಂದ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ವರಿಷ್ಠರನ್ನು ಭೇಟಿ ಮಾಡಲಾಗುವುದು’ ಎಂದು ಭಿನ್ನಮತೀಯ ನಾಯಕರು ತಿಳಿಸಿದರು. ‘ನಮ್ಮ ಕೆಲವು ನಾಯಕರು ಕೇಂದ್ರದ ಕೆಲವು ನಾಯಕರನ್ನು ಮಂಗಳವಾರ ಭೇಟಿ ಮಾಡಿದ್ದಾರೆ. ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇವೆ. ಸಮಯಾವಕಾಶ ಕೊಟ್ಟ ಕೂಡಲೇ ಭೇಟಿ ಮಾಡುತ್ತೇವೆ’ ಎಂದು ಯತ್ನಾಳ ಮಾಹಿತಿ ನೀಡಿದರು. ವರಿಷ್ಠರ ಭೇಟಿ ಸಾಧ್ಯವಾಗದ ಕಾರಣ ಭಿನ್ನಮತೀಯ ನಾಯಕರು ದೆಹಲಿಯಿಂದ ನಿರ್ಗಮಿಸಿದರು.
ಬಿವೈವಿ ಪರ ಇಬ್ಬರು ಪೇಮೆಂಟ್ ಸ್ವಾಮೀಜಿಗಳು: ಯತ್ನಾಳ
‘ಬಿ.ಎಸ್.ಯಡಿಯೂರಪ್ಪ ಪರವಾಗಿ ಎಲ್ಲ ಲಿಂಗಾಯತರು ಇಲ್ಲ. ಯಡಿಯೂರಪ್ಪ ಆ ಗೌರವ ಉಳಿಸಿಕೊಂಡಿಲ್ಲ. ಬಿ.ವೈ. ವಿಜಯೇಂದ್ರ ಜತೆಗೆ ಇಬ್ಬರು ಮೂವರು ಪೇಮೆಂಟ್ ಸ್ವಾಮೀಜಿಗಳಿದ್ದಾರೆ ಅಷ್ಟೇ’ ಎಂದು ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಗಿ ಹೇಳಿದರು.
ಬುಧವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಕ್ಕೆ ನಮ್ಮ ತೀವ್ರ ವಿರೋಧ ಇದೆ ಎಂದು ಅವರು ಪುನರುಚ್ಚರಿಸಿದರು.
‘ವಿಜಯೇಂದ್ರ ಕರ್ಮಕಾಂಡ ಬಹಳ ಇದೆ. ಅವರು ಹಲವು ಹಲ್ಕಾ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಸಹಿಯನ್ನೇ ವಿಜಯೇಂದ್ರ ನಕಲಿ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿದ್ದರಾಮಯ್ಯ ಅವರಿಗೆ ಏನು ಧಾಡಿ’ ಎಂದು ಅವರು ಪ್ರಶ್ನಿಸಿದರು.
‘ಬಹಳಷ್ಟು ಲಿಂಗಾಯತ ನಾಯಕರ ರಾಜಕೀಯ ಜೀವನವನ್ನು ಯಡಿಯೂರಪ್ಪ ಮುಗಿಸಿದರು. ಬಸವರಾಜ ಪಾಟೀಲ ಸೇಡಂ, ಬಿ.ಬಿ.ಶಿವಪ್ಪ, ಜಿ.ಎಂ. ಸಿದ್ದೇಶ್ವರ, ಮಲ್ಲಿಕಾರ್ಜುನಯ್ಯ ಅವರನ್ನು ಮುಗಿಸಿದರು. ನನ್ನನ್ನು ಮುಗಿಸಲು ಸತತ ಪ್ರಯತ್ನ ಮಾಡಿದರು. ಇದೀಗ, ರಮೇಶ ಜಾರಕಿಹೊಳಿ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದರು.
‘ಹಿಂದೂಗಳ ಹತ್ಯೆಯಾದಾಗ ಯಡಿಯೂರಪ್ಪ ಮೌನವಾಗಿದ್ದರು. ಶಿವಮೊಗ್ಗದಲ್ಲಿ ಔರಂಗಜೇಬನ ಫೋಟೋ ಹಾಕಿದ ಸಂದರ್ಭದಲ್ಲೂ ಹೋರಾಟ ಮಾಡಲಿಲ್ಲ. ಸಚಿವ ಜಮೀರ್ ಅಹ್ಮದ್ ಖಾನ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ ಕೊನೆಗಾಣಿಸಲು ನಮ್ಮ ಹೋರಾಟ ನಿರಂತರ’ ಎಂದರು.
‘ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ವಿಜಯೇಂದ್ರ ಶಾಸಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಶೀರ್ವಾದದಿಂದ ಶಾಸಕರಾಗಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಸರ್ಕಾರ ಬರಲು ಯಡಿಯೂರಪ್ಪ ಕಾರಣ ಅಲ್ಲ. ರಮೇಶ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ ಅವರಿಂದಾಗಿ ನಮ್ಮ ಸರ್ಕಾರ ಬಂತು’ ಎಂದು ಅವರು ಹೇಳಿದರು.
ಯಡಿಯೂರಪ್ಪ ಹೊಸ ನಾಟಕ ಕಂಪನಿ ತೆಗೆದಿದ್ದಾರೆ. ಹುಷಾರಿಲ್ಲ ಎಂದು ನಾಟಕ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರು ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದ್ದು ಹೇಗೆ? ಎಲ್ಲರನ್ನೂ ಕರೆಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ಸಂಖ್ಯೆಯ ಮೊಮ್ಮಕ್ಕಳು ಇದ್ದಾರೆ. ಅವರೊಂದಿಗೆ ಆಟ ಆಡುತ್ತಾ ಕುಳಿತರೆ ನೂರು ವರ್ಷ ಬದುಕಬಹುದು. ಅವರು ಬಾಯಿ ಮುಚ್ಚಿ ಕುಳಿತುಕೊಂಡು ಮಕ್ಕಳನ್ನು, ಮೊಮ್ಮಕ್ಕಳನ್ನು ಸಂಭಾಳಿಸಲಿ.ಬಸನಗೌಡ ಪಾಟೀಲ ಯತ್ನಾಳ, ಭಿನ್ನಮತೀಯ ನಾಯಕ
ನಮಗೆ ರಾಷ್ಟ್ರ ನಾಯಕರು ಒಳ್ಳೆಯ ಸುದ್ದಿ ಕೊಡಲಿದ್ದಾರೆ ಹಾಗೂ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ. ಫೆ.10ರ ಬಳಿಕ ಉತ್ತಮ ಸುದ್ದಿ ಕೊಡುತ್ತೇವೆ.ಜಿ.ಎಂ. ಸಿದ್ದೇಶ್ವರ, ಮಾಜಿ ಸಂಸದ
ಒಂದು ಕಾಲದಲ್ಲಿ ಜೆಸಿಬಿ, ಬಸ್ ಡ್ರೈವರ್ ಆಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಕ್ಕರೆ ಕಾರ್ಖಾನೆ ಮಾಲೀಕ ಆಗಿದ್ದು ಹೇಗೆ?ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
ಆರ್‌ಎಸ್‌ಎಸ್ ನಾಯಕರ ಬಳಿ ನಾನು ಹೋಗಿಲ್ಲ. ಅಂತಹ ವ್ಯವಸ್ಥೆ ಆರ್‌ಎಸ್‌ಎಸ್‌ನಲ್ಲಿ ಇಲ್ಲ. ರಾಜ್ಯಾಧ್ಯಕ್ಷರ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರು ಎಲ್ಲವನ್ನೂ ತೀರ್ಮಾನಿಸುತ್ತಾರೆ.ಆರ್. ಅಶೋಕ, ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.