ADVERTISEMENT

29ರಂದು 2ಎ ಮೀಸಲಾತಿ ಘೋಷಣೆ: ಪಂಚಮಸಾಲಿ ಹೋರಾಟ ಸಮಿತಿಗೆ ಸಿಎಂ ಭರವಸೆ -ಯತ್ನಾಳ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 22:30 IST
Last Updated 22 ಡಿಸೆಂಬರ್ 2022, 22:30 IST
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಗುರುವಾರ ನಡೆದ ಪಂಚಮಸಾಲಿ ಸಮುದಾಯದ ವಿರಾಟ್‌ ಪಂಚಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ --–ಪ್ರಜಾವಾಣಿ ಚಿತ್ರ
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಗುರುವಾರ ನಡೆದ ಪಂಚಮಸಾಲಿ ಸಮುದಾಯದ ವಿರಾಟ್‌ ಪಂಚಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ --–ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಡಿ.29ರಂದು 2ಎ ಮೀಸಲಾತಿ ಘೋಷಿಸುವುದಾಗಿ ಮುಖ್ಯ
ಮಂತ್ರಿ ಹೇಳಿದ್ದಾರೆ. ಇಷ್ಟು ವರ್ಷಗಳ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ.ಇನ್ನೊಂದು ವಾರ ತಾಳ್ಮೆಯಿಂದ ಕಾಯೋಣ’ ಎಂದು ಲಿಂಗಾಯತಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರೂ ಆದ ಶಾಸಕ ಬಸನ ಗೌಡ ಪಾಟೀಲ ಯತ್ನಾಳ ಹೇಳಿದರು.

ಸುವರ್ಣಸೌಧ ಮುಂಭಾಗ ಗುರುವಾರ ಆಯೋಜಿಸಿದ್ದ ವಿರಾಟ್‌ ಪಂಚಶಕ್ತಿ ಸಮಾವೇಶವನ್ನು ಕಹಳೆ ಮೊಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬಹುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿದೆ. ಸರ್ಕಾರ ಇದನ್ನು ಒಪ್ಪಿದೆ. ಮೊದಲು ವರದಿಯನ್ನು ಪೂರ್ಣವಾಗಿ ಅಧ್ಯಯನ ಮಾಡುತ್ತೇನೆ. ಡಿ.28ರಂದು ಸರ್ವಪಕ್ಷ
ಗಳ ಸಭೆ ಕರೆದು ಚರ್ಚಿಸುತ್ತೇನೆ. ಡಿ.29ರಂದು ಸದನದಲ್ಲಿ ಇಟ್ಟು ಮೀಸಲಾತಿ ಘೋಷಣೆ ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಅವರು ಆತ್ಮಸಾಕ್ಷಿಯಾಗಿ, ತಾಯಿ ಸಾಕ್ಷಿ ಮಾಡಿ ನನಗೆ ಹೇಳಿದ್ದಾರೆ’ ಎಂದರು.

ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಎಲ್ಲ ಮೇಲ್ವರ್ಗದ ಪಂಗಡ ಗಳಿಗೆ ಶೇ10ರಷ್ಟು ಮೀಸಲಾತಿಯನ್ನು ಘೋಷಿಸಿದೆ. ನರೇಂದ್ರ ಮೋದಿ ಅವರು ಘೋಷಿಸಿದ ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ದೊರೆ ಯಲಿದೆ’ ಎಂದೂ ಯತ್ನಾಳ ಸ್ಪಷ್ಟಪಡಿಸಿದರು.

ADVERTISEMENT

‘ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧರಾಗಿಯೇ ಬಂದಿದ್ದೆವು. ಆದರೆ, ಸರ್ಕಾರದ ನಿರ್ಣಯ ನಮ್ಮ ಪರವಾಗಿದೆ. ಒಂದು ವೇಳೆ ರಾಗ ಬದಲಿಸಿದರೆ ಡಿ.30ರಿಂದ ಮುಖ್ಯಮಂತ್ರಿಯೂ ಸೇರಿ ಎಲ್ಲ ಸಚಿವರನ್ನೂ ಮನೆಗೆ ಕಳುಹಿಸಲು ಸಿದ್ಧರಾಗಿ’ ಎಂದೂ ಅವರು ಕರೆ ನೀಡಿದರು.

‘ಪಂಚಮಸಾಲಿ ಸಮುದಾಯ ತೀರ ಕಷ್ಟದಲ್ಲಿದೆ, ಮೀಸಲಾತಿಗೆ ಹಕ್ಕುದಾರರು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಸಲ್ಲಿಸಿದ ವರದಿಯಲ್ಲಿದೆ’ ಎಂದೂ ತಿಳಿಸಿದರು.

‘ನಾವು ಸ್ವಾರ್ಥಿಗಳಲ್ಲ. ನಮ್ಮ ಕೆಲಸ ಮುಗಿದ ಮೇಲೆ ಹಾಲುಮತ ಸಮಾಜಕ್ಕೆ ಎಸ್‌.ಟಿ ಮೀಸಲಾತಿ, ಮರಾಠ, ಬ್ರಾಹ್ಮಣ, ಮಡಿವಾಳ ಸಮಾಜಗಳಿಗೆ ಯಾವ ರೀತಿಯ ಮೀಸಲಾತಿ ಬೇಕೆಂಬ ಹೋರಾಟ ಆರಂಭಿಸುತ್ತೇವೆ’ ಎಂದೂ ಯತ್ನಾಳ ಹೇಳಿದರು.

ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃಂತ್ಯುಂಜಯ ಸ್ವಾಮೀಜಿ, ‘ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿ ಎಂದು ಬಂಡವಾಳಶಾಹಿಯೊಬ್ಬರು ನನಗೆ ಹೇಳಿದರು. ಆದರೆ, ನಾನು ಪೀಠ ಏರಿದ್ದು ನನ್ನ ಸಮಾಜದ ಜನರ ಉದ್ಧಾರಕ್ಕಾಗಿಯೇ ಹೊರತು ಯಾರನ್ನೋ ಶಾಸಕ, ಮಂತ್ರಿ ಮಾಡಲು ಅಲ್ಲ’ ಎಂದರು.

‘ಲಿಂಗಾಯತರಲ್ಲಿ ಶೇ 72ರಷ್ಟು ಪಂಚಮಸಾಲಿ ಇದ್ದಾರೆ. ಹೋರಾಟ ಆರಂಭಿಸಿದಾಗ ಕೆಲವರು ನಮ್ಮನ್ನು ಹುಚ್ಚರು ಎಂದು ಜರಿದರು. ಈಗ ಮೀಸಲಾತಿ ಸಿಗುತ್ತದೆ ಎಂದ ತಕ್ಷಣ ಸಮಾವೇಶದಲ್ಲಿ ತಾವೂ ಭಾಗಿಯಾಗಲು ಬಂದರು. ಆದರೆ, ನೂರಾರು ಕಿ.ಮೀ ಪಾದಯಾತ್ರೆ ಮಾಡಿ ಹೋರಾಡಿದವರು ನಾವು. ಯಾರು ಸಮಾಜದ ಜತೆಗೆ ಹೆಜ್ಜೆ ಹಾಕಿಲ್ಲವೋ ಅವರನ್ನೆಲ್ಲ ಮುಂದಿನ ಬಾರಿ ಧಿಕ್ಕರಿಸಿ’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಮಹಾಂತೇಶ ದೊಡ್ಡಗೌಡರ, ಸಿದ್ದು ಸವದಿ, ರಾಜಕುಮಾರ ಪಾಟೀಲ ತೇಲ್ಕೂರ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವು ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್‌ ಸದಸ್ಯರು, ಮುಖಂಡರೂ ಪಕ್ಷಾತೀತವಾಗಿ ವೇದಿಕೆಯಲ್ಲಿ ಇದ್ದರು.

ವಿರಾಟ್‌ ರೂಪ ದರ್ಶನ

ಗುರುವಾರ ಬೆಳಿಗ್ಗೆ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಿಂದ ಹೊರಟ ಪಾದಯಾತ್ರೆ ಮಧ್ಯಾಹ್ನ1.30ಕ್ಕೆ ಸಮಾವೇಶದ ಸ್ಥಳ ತಲುಪಿತು. ಸಾವಿರಾರು ಜನ ಸುಡುವ ಬಿಸಿಲಲ್ಲೂ ಉತ್ಸಾಹದಿಂದ ಹೆಜ್ಜೆ ಹಾಕಿದರು.

ರಾಜ್ಯದ ವಿವಿಧೆಡೆಯಿಂದ ಸಮಾವೇಶಕ್ಕೆ ಜನಸಾಗರವೇ ಹರಿದು ಬಂತು. ಎತ್ತ ಕಣ್ಣು ಹಾಯಿಸಿದರೂ ಜನವೋ ಜನ. ಯುವಕ, ಯುವತಿಯರು, ಮಹಿಳೆಯರು ಸೇರಿ ಬಸವಣ್ಣನ ಭಾವಚಿತ್ರವಿರುವ ಧ್ವಜ ಹಿಡಿದು, ಬಿಳಿ ಟೊಪ್ಪಿಗೆ ಧರಿಸಿ ಪಾಲ್ಗೊಂಡರು. ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಇಡೀ ದಿನ ಸಂಚಾರ ದಟ್ಟಣೆ ಉಂಟಾಯಿತು.

ಮುಗಿಲು ಮುಟ್ಟಿದ ಹರ್ಷೋದ್ಗಾರ

‘ಮೀಸಲಾತಿ ಸಿಕ್ಕೇ ಬಿಟ್ಟಿತು’ ಎಂದು ವೇದಿಕೆಯಲ್ಲಿ ಘೋಷಣೆ ಮಾಡುತ್ತಿದ್ದಂತೆಯೇ ಜನಸ್ತೋಮದ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಛಂಗನೆ ಎದ್ದುನಿಂತು ಕೂಗಾಟ, ಚೀರಾಟ ಶುರು ಮಾಡಿದರು. ಶಿಳ್ಳೆ, ಚಪ್ಪಾಳೆ ತಟ್ಟಿ, ಧ್ವಜ ಹಾರಿಸಿ, ಜೈಕಾರ ಹಾಕಿದರು. ಯುವಕರು ನಿಂತ ಜಾಗದಲ್ಲೇ ಕುಣಿದು ಕುಪ್ಪಳಿಸಿದರು.

ಬಸವಣ್ಣನಿಗೆ ಜಯವಾಗಲಿ, ಪಂಚಮಸಾಲಿ ಜಗದ್ಗುರುವಿಗೆ ಜಯವಾಗಲಿ, ಯತ್ನಾಳ ಗೌಡರಿಗೆ, ಹುನಗುಂದ ಹುಲಿ (ಕಾಶಪ್ಪನವರ)ಗೆ ಜಯವಾಗಲಿ, ಧಾರವಾಡ ಹುಲಿ (ವಿನಯ ಕುಲಕರ್ಣಿ)ಗೆ ಜಯವಾಗಲಿ... ಎಂದು ನಿರಂತರ ಘೋಷಣೆ ಮೊಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.