ADVERTISEMENT

ನಾನು ಮತ್ತೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ: ಯಡಿಯೂರಪ್ಪ

ಪಕ್ಷದ ವರಿಷ್ಠರು ನನ್ನ ಕಡೆಗಣಿಸಿಲ್ಲ: ನಿವೃತ್ತಿ ಪ್ರಶ್ನೆಯೇ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 17:31 IST
Last Updated 20 ನವೆಂಬರ್ 2021, 17:31 IST
ಬಾಗಲಕೋಟೆಯಲ್ಲಿ ಶನಿವಾರ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ವೇದಿಕೆಯಲ್ಲಿದ್ದ ಮುಖಂಡರಿಗೆ ಸಾಮೂಹಿಕವಾಗಿ ಹೂವಿನ ಹಾರ ಹಾಕಿ ಗೌರವಿಸಲಾಯಿತು. ಸಚಿವ ಬಿ.ಶ್ರೀರಾಮುಲು, ಶಾಸಕರಾದ ವೀರಣ್ಣ ಚರಂತಿಮಠ, ಬಿ.ಎಸ್.ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಪಕ್ಷದ ಅಭ್ಯರ್ಥಿ ಪಿ.ಎಚ್.ಪೂಜಾರ ಚಿತ್ರದಲ್ಲಿದ್ದಾರೆ
ಬಾಗಲಕೋಟೆಯಲ್ಲಿ ಶನಿವಾರ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ವೇದಿಕೆಯಲ್ಲಿದ್ದ ಮುಖಂಡರಿಗೆ ಸಾಮೂಹಿಕವಾಗಿ ಹೂವಿನ ಹಾರ ಹಾಕಿ ಗೌರವಿಸಲಾಯಿತು. ಸಚಿವ ಬಿ.ಶ್ರೀರಾಮುಲು, ಶಾಸಕರಾದ ವೀರಣ್ಣ ಚರಂತಿಮಠ, ಬಿ.ಎಸ್.ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಪಕ್ಷದ ಅಭ್ಯರ್ಥಿ ಪಿ.ಎಚ್.ಪೂಜಾರ ಚಿತ್ರದಲ್ಲಿದ್ದಾರೆ   

ಬಾಗಲಕೋಟೆ: 'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಮತ್ತೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ‘ ಎಂದು ಶಾಸಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು,’ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಪಕ್ಷದ ವರಿಷ್ಠರು ನನ್ನನ್ನು ಕಡೆಗಣಿಸಿಲ್ಲ. ಬಿಜೆಪಿಯ ಹಿರಿಯರು, ನಾಯಕರು ಆತ್ಮೀಯವಾಗಿಯೇ ಇದ್ದಾರೆ. ರಾಜಕೀಯ ನಿವೃತ್ತಿಯ ಪ್ರಶ್ನೆಯೂ ಇಲ್ಲ‘ ಎಂದರು.

’ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ 140 ಸ್ಥಾನಗಳನ್ನು ಗೆಲ್ಲಿಸಿಕೊಡಲು ಜನಸ್ವರಾಜ್ ಯಾತ್ರೆಯ ನಂತರ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸುತ್ತಾಡಿ ಸಂಘಟನೆ ಕಟ್ಟುವ ಕೆಲಸ ಆರಂಭಿಸುವೆ‘ ಎಂದು ಹೇಳಿದರು.

ADVERTISEMENT

‘ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಬಲ ಇದ್ದರೆ ಸಾಕು.ಮುಂದಿನ 20 ವರ್ಷಗಳ ಕಾಲ ದೇಶದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹೀಗಾಗಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದರ ಹಿಂದೆ ಚುನಾವಣಾ ಉದ್ದೇಶ ಇಲ್ಲ‘ ಎಂದು ಹೇಳಿದರು.

’ರೈತರ ಹೋರಾಟದ ಸಂದರ್ಭದಲ್ಲಿ ಆದ ಸಾವು ನೋವಿಗೆ ಬೇರೆ ಬೇರೆ ಕಾರಣಗಳು ಇವೆ. ಅದು ನಿಮಗೆ ಹಾಗೂ ನಮಗೆ ಗೊತ್ತಿರುವ ಸಂಗತಿ‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಲ್ ಪಾಸ್ ಮಾಡಿಕೊಳ್ಳಲು ಗೆಲ್ಲೋಣ: ಶ್ರೀರಾಮುಲು

ಬಾಗಲಕೋಟೆ: 'ಎಪಿಎಂಸಿ ಬಿಲ್, ರೈತರ ಬಿಲ್ ನಂತಹ ಕಾಯ್ದೆಗಳನ್ನು ಸುಲಭವಾಗಿ ಪಾಸ್ ಮಾಡಿಕೊಳ್ಳಲು ವಿಧಾನಪರಿಷತ್ ನಲ್ಲಿ ಹೆಚ್ಚಿನ ಸ್ಥಾನ ಪಡೆಯಬೇಕಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ' ಎಂದು ಕಾರ್ಯಕರ್ತರಿಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಜನಸ್ವರಾಜ್ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ಪರ ಮನವಿ ಮಾಡಿದರು.

ಕಾಂಗ್ರೆಸ್ ಇಂದು ಯಾರಿಗೂ ಬೇಡವಾಗಿದೆ. ಅಲ್ಲಿ ಈಗ ಸಮರ್ಥ ನಾಯಕತ್ವವೂ ಇಲ್ಲ ಎಂದು ವ್ಯಂಗ್ಯವಾಡಿದ ಶ್ರೀರಾಮುಲು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು 2023ರವರೆಗೆ ಕಾಯುವ ಅಗತ್ಯವಿಲ್ಲ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿಯೇ ಬಂಡೆ ಒಡೆಯೋಣ ಎಂದರು.

ರಾಜ್ಯದಲ್ಲಿ ಬಿಜೆಪಿ ಅಲೆ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ವಿಧಾನಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 15 ಸ್ಥಾನಗಳನ್ನು ನಿಶ್ಚಿತವಾಗಿಯೂ ಬಿಜೆಪಿ ಗೆಲ್ಲಲಿದೆ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.