ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ನಾಯಕರನ್ನು ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿಕೊಂಡು ಬಂದಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಮಠಾಧೀಶರನ್ನು ಮುಂದಿಟ್ಟುಕೊಂಡು ಆಟವಾಡಿದರು. ಪುತ್ರನ ವಿಚಾರದಲ್ಲಿ ಮತ್ತೆ ಹಳೆಯ ಆಟವನ್ನು ಮುಂದುವರಿಸಿದ್ದಾರೆ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಕಿಡಿಕಾರಿದರು.
‘ವೀರಶೈವ ಲಿಂಗಾಯತ ನಾಯಕರ ಸಮಾವೇಶ ಮಾಡುವುದರಲ್ಲಿ ಅರ್ಥವಿಲ್ಲ. ರಾಷ್ಟ್ರೀಯ ನಾಯಕರು ತಮ್ಮ ಜೊತೆಗಿಲ್ಲ ಎಂಬ ಭಾವನೆ ಇರುವವರು ಇಂತಹ ಸಮಾವೇಶ ಸಂಘಟಿಸುತ್ತಿರಬಹುದು. ಈ ಭಯ ನಮಗಿಲ್ಲ. ಪಕ್ಷಕ್ಕೆ ದ್ರೋಹ ಎಸಗಿದವರು, ಭ್ರಷ್ಟರು, ಹೊಂದಾಣಿಕೆ ರಾಜಕಾರಣ ಮಾಡಿದವರನ್ನು ಪಕ್ಷದಿಂದ ತೊಲಗಿಸುವ ಹೋರಾಟ ಮುಂದುವರಿಯಲಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಬಿಜೆಪಿಯ ಆಂತರಿಕ ಕಿತ್ತಾಟದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಪಕ್ಷದ ಆಂತರಿಕ ಬೇಗುದಿ ಬಗೆಹರಿಸಲು ರಾಷ್ಟ್ರೀಯ ನಾಯಕರು ಇನ್ನೂ ಗಮನ ಹರಿಸಿದಂತೆ ಕಾಣುತ್ತಿಲ್ಲ. ನಾವು ಇನ್ನೂ ಆಶಾದಾಯಕರಾಗಿದ್ದೇವೆ. ಮುಂಬರುವ ದಿನಗಳಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ಇರುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.