ADVERTISEMENT

Yettinahole | 100 ದಿನದಲ್ಲಿ 42 ಕಿ.ಮೀ.ವರೆಗೆ ಎತ್ತಿನಹೊಳೆ ನೀರು: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 10:23 IST
Last Updated 22 ಆಗಸ್ಟ್ 2023, 10:23 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಹಾಸನ: ಮುಂದಿನ 100 ದಿನದಲ್ಲಿ 42 ಕಿಮೀ ವರೆಗಿನ ಮೊದಲ ಹಂತದ ಎತ್ತಿನಹೊಳೆ ಯೋಜನೆಗೆ ನೀರು ಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಸಂಬಂಧ ಈಗಾಗಲೇ ₹14 ಸಾವಿರ ಕೋಟಿ ವೆಚ್ಚವಾಗಿದೆ. ಮೊದಲ ಹಂತದ ನೀರು ಹರಿಸಲು ಅರಣ್ಯ ಇಲಾಖೆ, ಕಂದಾಯ ಮತ್ತು ವಿದ್ಯುತ್ ಸರಬರಾಜು ಇಲಾಖೆ ಸಮನ್ವಯದಿಂದ ಕೆಲಸ ಮಾಡುವ ಮೂಲಕ ಯೋಜನೆ ಸಾಕಾರಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.

ಮೊದಲ ಹಂತದ ಯೋಜನೆ ಸಾಗುವ ಜಾಗದಲ್ಲಿ 10 ಸಾವಿರ ಅಡಿ ಭೂಮಿ ಸಂಬಂಧ ವ್ಯಾಜ್ಯ ನಡೆಯುತ್ತಿದ್ದು ಇದಕ್ಕಾಗಿ ಮೂರು ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಬಗ್ಗೆಯೂ ಗಮನ ಹರಿಸುವಂತೆ ಹಾಗೂ ಕೂಡಲೇ ಪರಿಹಾರ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ADVERTISEMENT

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರನ್ನು ಎತ್ತುವಳಿ ಮಾಡುವುದು ಪ್ರಥಮ ಆದ್ಯತೆಯಾಗಿದ್ದು, ನಂತರ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾದಲ್ಲಿ, ಪರ್ಯಾಯ ವ್ಯವಸ್ಥೆ ಬಗ್ಗೆಯೂ ಚಿಂತನೆ ನಡೆದಿದ್ದು, ಮುಂದಿನ ಹಂತದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.