ADVERTISEMENT

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ: ದಿನೇಶ್‌ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 9:00 IST
Last Updated 21 ಜೂನ್ 2025, 9:00 IST
   

ಬೆಂಗಳೂರು: ‘ರಾಜ್ಯದಲ್ಲಿ ಹೆಚ್ಚಿನ ಜನರಿಗೆ ಯೋಗ ಪರಿಚಯಿಸುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ಗಳನ್ನು ಆರಂಭಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಧಾನಸೌಧದ ಮೆಟ್ಟಿಲುಗಳಲ್ಲಿ ಆಯುಷ್ ಇಲಾಖೆಯಿಂದ ಶನಿವಾರ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಚಾಲನೆ ನೀಡಿದರು. ದಿನೇಶ್ ಗುಂಡೂರಾವ್, ಸಭಾಪತಿ ಬಸವರಾಜ ಹೊರಟ್ಟಿ, ನಟರಾದ ಅನಿರುದ್, ಕಿಶನ್, ನಟಿ ಸಾನಿಯಾ ಅಯ್ಯರ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಯೋಗಭ್ಯಾಸ ನಡೆಸಿದರು.

ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿರುವ ಯೋಗವನ್ನು ನಾವು ಹೆಚ್ಚಿನ ಜನರಿಗೆ ಪರಿಚಯಿಸಬೇಕಾಗಿದೆ. ಯೋಗವನ್ನು ಪರಿಚಯಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಎಲ್ಲ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಯೋಗ ಪರಿಚಯಿಸುವ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ’ ಎಂದರು.

ADVERTISEMENT

‘ಮೈಸೂರು ಜಿಲ್ಲೆಯನ್ನು ಯೋಗ ಜಿಲ್ಲೆಯಾಗಿ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ.‌ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮೈಸೂರು ಜಿಲ್ಲೆಯ ಪ್ರತಿ ಮನೆಗಳಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಒಂದು ಜಿಲ್ಲೆಯನ್ನು ಸಂಪೂರ್ಣವಾಗಿ ಯೋಗ ಜಿಲ್ಲೆಯನ್ನಾಗಿ ರೂಪಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದಲ್ಲಿ ಪರಂಪರಾಗತವಾಗಿ ಬಂದ ಅಷ್ಟಾಂಗ ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದೂ ಹೇಳಿದರು.

ಆಯುಷ್ ಇಲಾಖೆಯಿಂದ ರಾಜ್ಯದ ವಿವಿಧೆಡೆ ಯೋಗ ಪಾರ್ಕ್, ಯೋಗ ಧನುಷ್, ಹಸಿರು ಯೋಗ, ಯೋಗ ಮಹಾಕುಂಭ, ಯೋಗ ಸಂಯೋಗ, ಯೋಗ ಅನ್ ಪ್ಲಗ್ಸ್ ನಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಸಿರು ಯೋಗ ಕಾರ್ಯಕ್ರಮದ ಅಡಿಯಲ್ಲಿ 1 ಲಕ್ಷ ಗಿಡಗಳನ್ನ ನೆಡಲಾಗುತ್ತಿದೆ. ಯೋಗ ಧನುಷ್ ಕಾರ್ಯಕ್ರಮದ ಮೂಲಕ 5 ಲಕ್ಷ ಜನರಿಗೆ ಯೋಗ ಪ್ರೋಟೋಕಾಲ್ ಹೇಳಿಕೊಡಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 5 ಸಾವಿರ ಶಾಲೆಗಳಲ್ಲಿ ಯೋಗ ಪ್ರೋಟೋಕಾಲ್ ಮಾಡಲು ಕ್ರಮಕೈಗೊಳ್ಳಲಾಗಿದೆ’ ಎಂದರು.‌

ಸಮತೋಲಿತ ಜಗತ್ತನ್ನು ಸೃಷ್ಟಿಸೋಣ: ಗೆಹಲೋತ್‌

‘ಯೋಗಾಭ್ಯಾಸವು ನಮ್ಮನ್ನು ಅಹಿಂಸೆ, ಕರುಣೆ ಮತ್ತು ಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ. ಇವು ಭೂಮಿಯ ಸುಸ್ಥಿರ ಅಭಿವೃದ್ಧಿ ಮತ್ತು ರಕ್ಷಣೆಗೆ ಅತ್ಯಗತ್ಯ. ಆದ್ದರಿಂದ, ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸಲು ಯೋಗವನ್ನು ಅಳವಡಿಸಿಕೊಳ್ಳುವುದು ಇಂದಿನ ಅತಿ ದೊಡ್ಡ ಅಗತ್ಯವಾಗಿದೆ’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಹೇಳಿದರು.

‘ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಆತ್ಮ ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಪರಿಪೂರ್ಣತೆಯ ನಡುವಿನ ಸಮತೋಲನದ ಮಾಧ್ಯಮವಾಗಿದೆ. ಯೋಗವು ನಮ್ಮನ್ನು ಸಂಯಮ, ಸಮತೋಲನ ಮತ್ತು ಪ್ರಕೃತಿಯ ಕಡೆಗೆ ಸಂವೇದನಾಶೀಲರನ್ನಾಗಿ ಮಾಡುತ್ತದೆ. ಇದು ಸಾವಿರಾರು ವರ್ಷಗಳಿಂದ ಮಾನವ ಆರೋಗ್ಯ ಮತ್ತು ಅದರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಭಾರತದ ಸಾಂಸ್ಕೃತಿಕ ಸಂಪ್ರದಾಯದ ಸಂಕೇತವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.