ADVERTISEMENT

ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ಮೋದಿ ಜೊತೆ ಯೋಗಾಭ್ಯಾಸಿಗಳ ಯೋಗ!

ಮೈಸೂರು ಅರಮನೆ ಆವರಣದಲ್ಲಿ ಐತಿಹಾಸಿಕ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 18:45 IST
Last Updated 21 ಜೂನ್ 2022, 18:45 IST
ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಆವರಣದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರೊಂದಿಗೆ ಯೋಗಾಸನಗಳನ್ನು ಮಾಡಿದರು.  ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಆವರಣದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರೊಂದಿಗೆ ಯೋಗಾಸನಗಳನ್ನು ಮಾಡಿದರು.  ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ನಗರದ ಅರಮನೆ ಆವರಣವು ಮಂಗಳವಾರ ಮುಂಜಾನೆ ಐತಿಹಾಸಿಕ ಯೋಗಾಭ್ಯಾಸಕ್ಕೆ ಸಾಕ್ಷಿ ಯಾಯಿತು. ಅಪರೂ‍ಪದ ಕಾರ್ಯಕ್ರಮಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಯೋಗಪಟುಗಳು ಸಾಕ್ಷಿಯಾದರು.

‘ಮಾನವೀಯತೆಗಾಗಿ ಯೋಗ’ ಘೋಷ ವಾಕ್ಯದಡಿ ನಡೆದ 8ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ‌ ಅವರು, ಸ್ವತಃ ಯೋಗಾಭ್ಯಾಸ ಮಾಡಿ ಇಡೀ ವಿಶ್ವವೇ ಮೈಸೂರಿನತ್ತ ನೋಡುವಂತೆ ಮಾಡಿದರು.

ಬೆಳಗಿನ ಜಾವ 4 ಗಂಟೆಯಿಂದಲೇ ಯೋಗಾಭ್ಯಾಸಿಗಳು ಅರಮನೆಯತ್ತ ನಡೆದು‌ ಬಂದಿದ್ದು ವಿಶೇಷವಾಗಿತ್ತು. ಬೆಳಿಗ್ಗೆ 6.34 ರ ವೇಳೆಗೆ ವೇದಿಕೆಗೆ ಬಂದ ಪ್ರಧಾನಿ ಅಭ್ಯಾಸಿಗಳಲ್ಲಿ ರೋಮಾಂಚನ ಮೂಡಿಸಿದರು.

ADVERTISEMENT

‘ಸಂಪ್ರದಾಯಸ್ಥ ಮನೆಗಳಲ್ಲಿ, ಅಧ್ಯಾತ್ಮ ಕೇಂದ್ರಗಳಲ್ಲಷ್ಟೇ ಇದ್ದ ಯೋಗ ಈಗ ವಿಶ್ವದ ಮನೆ ಮನೆಗೂ ತಲುಪಿದೆ. ಸಹಜ, ಸ್ವಾಭಾವಿಕ, ಮಾನವೀಯ ಚೈತನ್ಯದ ಸಂಕೇತ. ಕೊರೊನಾ ಆತಂಕದ ಬಳಿಕ ಯೋಗದ ವೈಶ್ವಿಕ ಪರ್ವ ಆರಂಭವಾಗಿದೆ’ ಎಂದು ಪ್ರಧಾನಿ ಹೇಳಿದರು.

‘ಸ್ವಾತಂತ್ರ್ಯದ‌ ಅಮೃತ ಮಹೋತ್ಸವ ನಿಮಿತ್ತ 75 ಚಾರಿತ್ರಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗ ನಡೆದಿದೆ. ಇತಿಹಾಸದಲ್ಲಿ ವಿಶೇಷ ಸ್ಥಾನವುಳ್ಳ ಮೈಸೂರು ಅರಮನೆ ಆವರಣದಲ್ಲಿ ನಡೆದಿರುವ ಅಭ್ಯಾಸವು ದೇಶದ ವೈವಿಧ್ಯತೆಯನ್ನು ಯೋಗದ ಒಂದೇ ಸೂತ್ರದಲ್ಲಿ ಕೂಡಿಸುತ್ತದೆ’ ಎಂದರು.

ನಂತರ 45 ನಿಮಿಷಕ್ಕೂ ಹೆಚ್ಚು ಕಾಲ ಯೋಗ ಮಾಡಿದರು.

ಹಲವು ಕಷ್ಟಕರ ಆಸನಗಳನ್ನು ಹಾಗೂ ಪ್ರಾಣಾಯಾಮವನ್ನು ನಿರಾಯಾ
ಸವಾಗಿ ಮಾಡಿದ್ದು ವಿಶೇಷ ವಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸರ್ಬಾನಂದ್ ಸೋನಾವಲ್, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪಸಿಂಹ, ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರೂ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.