ಚನ್ನಪಟ್ಟಣ: ‘ಕನ್ನಡ ತಮಿಳಿನಿಂದ ಹುಟ್ಟಿರಬಹುದು ಎಂದು ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಅವರು, ಭಾಷೆಗಳ ನಡುವೆ ತಾರತಮ್ಯ ಮಾಡಿದ್ದಾರೆ. ತಮಿಳು ಮತ್ತು ಕನ್ನಡ ಎರಡೂ ಸಮಕಾಲೀನ ಭಾಷೆಗಳು. ಹಾಗಾಗಿ, ಕಮಲ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು‘ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಆಗ್ರಹಿಸಿದರು.
ಈ ಕುರಿತು ಪಟ್ಟಣದಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನಮ್ಮ ಭಾಷೆ ಮೇಲೆ ನಮಗೆ ಅಭಿಮಾನವಿದೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದ್ದು, ಇಲ್ಲಿನ ಸಾಹಿತ್ಯಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕಮಲ್ ಅವರು ತಮ್ಮ ಭಾಷೆ ಶ್ರೇಷ್ಠವೆಂದು ಬೇರೆ ಭಾಷೆಯನ್ನು ಕೀಳಾಗಿ ಕಾಣುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.
‘ಕಮಲ್ ಅವರ ಹೇಳಿಕೆಗೆ ಕನ್ನಡಿಗರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಾಗಿದೆ. ನಮ್ಮ ಭಾಷೆಯನ್ನು ಕೀಳಾಗಿ ಕಾಣುವುದನ್ನು ನಾನು ಸಹಿಸುವುದಿಲ್ಲ. ಕಮಲ್ ತಮ್ಮ ಹೇಳಿಕೆ ಕುರಿತು ಕ್ಷಮೆ ಕೇಳಬೇಕು ಎಂಬುದು ನಮ್ಮ ಆಗ್ರಹ. ಬಹುಶಃ ಅವರು ಕ್ಷಮೆ ಕೇಳುತ್ತಾರೆ ಎಂಬುದು ನನ್ನ ಭಾವನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.