ADVERTISEMENT

ಪ್ರಧಾನಿ ಮೋದಿ ಸರ್ವಾಧಿಕಾರಿ; ಇದು ದೇಶಕ್ಕೆ ತೀರಾ ಅಪಾಯಕಾರಿ: ವೈ.ಎಸ್‌.ವಿ.ದತ್ತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 11:18 IST
Last Updated 8 ಮಾರ್ಚ್ 2019, 11:18 IST
ವೈ.ಎಸ್.ವಿ ದತ್ತ
ವೈ.ಎಸ್.ವಿ ದತ್ತ   

ಚಿತ್ರದುರ್ಗ: ಇಂದಿರಾಗಾಂಧಿ ಅವರಿಗಿಂತಲೂ ಭೀಕರವಾದ ತುರ್ತುಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಗುಮ್ಮಾಗಿ ಸೃಷ್ಟಿ ಮಾಡಿದೆ. ಇದು ದೇಶಕ್ಕೆ ತೀರಾ ಅಪಾಯಕಾರಿ ಆಗಬಲ್ಲದು ಎಂದು ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್‌.ವಿ.ದತ್ತ ಆರೋಪಿಸಿದರು.

ನವೀಕೃತಗೊಂಡ ಜೆಡಿಎಸ್‌ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಜನತಂತ್ರ ವ್ಯವಸ್ಥೆಯ ಜೀವಾಳವಾಗಿರುವ ನ್ಯಾಯಾಲಯ, ಸಿಬಿಐ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ದುರ್ಗಲಗೊಳಿಸಲಾಗಿದೆ. ಬಿಜೆಪಿಯ ಸರ್ವಾಧಿಕಾರಿ ಧೋರಣೆ ಹೀಗೆ ಮುಂದುವರಿದರೆ ಮೋದಿ ಮತ್ತೊಬ್ಬ ಹಿಟ್ಲರ್‌, ಮುಸ್ಸೊಲಿನಿ ಆಗಲಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೇಂದ್ರ ಸರ್ಕಾರದ ಅಡಿಯಾಳಲ್ಲ. ಅದೊಂದು ಸ್ವಾಯತ್ತ ಸಂಸ್ಥೆ. ಈ ಪರಿಜ್ಞಾನವೇ ಇಲ್ಲದ ಪ್ರಧಾನಿ, ಆರ್‌ಬಿಐನಲ್ಲಿದ್ದ ₹ 3 ಲಕ್ಷ ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವಂತೆ ಒತ್ತಡ ಹೇರಿದ್ದರು. ಇದಕ್ಕೆ ಒಪ್ಪದ ಗವರ್ನರ್‌ ಅವರನ್ನು ಮನೆಗೆ ಕಳುಹಿಸಿ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಬಿಜೆಪಿಯ ಅಕ್ರಮಣಕಾರಿ ಸ್ವರೂಪದ ನಡೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು ಆತಂಕದಲ್ಲಿ ಬದುಕುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂತಹ ಪಕ್ಷವನ್ನು ಮಣಿಸಲು ಜಾತ್ಯತೀತ ಶಕ್ತಿಗಳು ಒಗ್ಗೂಡಿವೆ. ಪರಿಸ್ಥಿತಿಯ ಅನಿವಾರ್ಯತೆಯಿಂದ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸುವ ಮನಸ್ಥಿತಿಯನ್ನು ಜೆಡಿಎಸ್ ಕಾರ್ಯಕರ್ತರು ಬೆಳೆಸಿಕೊಳ್ಳಬೇಕಿದೆ’ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.