ADVERTISEMENT

ಯುವರಾಜ್‌ ಪ್ರಕರಣ: ತನಿಖೆ ಪ್ರಗತಿಯಲ್ಲಿದೆ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 19:14 IST
Last Updated 9 ಜನವರಿ 2021, 19:14 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ವಂಚನೆ ಪ್ರಕರಣದಲ್ಲಿ ಬಂಧನದಲ್ಲಿರುವ ಯುವರಾಜ್ ಮೇಲಿನ ಆರೋಪ ಕುರಿತಂತೆ ಈಗಾಗಲೇ ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಯುವರಾಜ್ ಮೇಲೆ ಕೆಲವು ಗಂಭೀರವಾದ ಆರೋಪಗಳು ಕೇಳಿಬಂದಿವೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದರು.

‘ಹಣಕಾಸು ವ್ಯವಹಾರ, ಉದ್ಯೋಗ ಕೊಡಿಸುವ ಭರವಸೆ, ಸರ್ಕಾರಿ ನೌಕರಿ ಹೀಗೆ ಹತ್ತಾರು ಆರೋಪಗಳಿವೆ. ಈ ಎಲ್ಲದರ ಬಗ್ಗೆ ತನಿಖೆ ನಡೆಸಿ, ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಿದ್ದಾರೆ’ ಎಂದರು.

ADVERTISEMENT

ಬಿಜೆಪಿ ನಾಯಕರ ಜೊತೆ ಯುವರಾಜ್ ಫೋಟೊ ತೆಗೆಸಿಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ, ‘ವಿಷಯ ಅದಲ್ಲ. ಆತನ ಮೇಲೆ ಗಂಭೀರವಾದ ಆರೋಪಗಳು ಕೇಳಿಬಂದಿವೆ. ಅದರ ಸತ್ಯಾಸತ್ಯತೆ ಹೊರಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ನಾವು ಅಧಿಕಾರದಲ್ಲಿದ್ದಾಗ ಅನೇಕರು ಬಂದು ನಮ್ಮ ಜೊತೆ ಫೋಟೊ ತೆಗೆಸಿಕೊಳ್ಳುತ್ತಾರೆ. ಯಾರಾದರೂ ಬಂದು ಹಾರ ಹಾಕಿ ಶಾಲು ಹೊದಿಸಿ, ಪೇಟಾ ತೊಡಿಸಿ ಸನ್ಮಾನ ಮಾಡಿದಾಗ ಬೇಡ ಎನ್ನಲು ಸಾಧ್ಯವೇ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.

‘ಯಾವ ಪಕ್ಷದ ಮುಖಂಡರ ಜೊತೆ ಸಂಬಂಧ ಇಟ್ಟುಕೊಂಡಿದ್ದ, ಫೋಟೊ ತೆಗೆಸಿಕೊಂಡಿದ್ದ ಎಂಬ ಪ್ರಶ್ನೆ ಮುಖ್ಯವಾಗುವುದಿಲ್ಲ. ಬಿಜೆಪಿ ಅಥವಾ ಆರ್‍ಎಸ್‍ಎಸ್ ನಾಯಕರ ಜೊತೆ ಫೋಟೊ ತೆಗೆಸಿಕೊಂಡ ತಕ್ಷಣವೇ ಆತನಿಗೂ ಪಕ್ಷಕ್ಕೂ ಸಂಬಂಧ ಕಟ್ಟುವುದು ಸರಿಯಲ್ಲ. ಅಪರಾಧ ಹಿನ್ನೆಲೆ ಇರುವವರು ಅಧಿಕಾರದಲ್ಲಿದ್ದಾಗ ನಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ. ಒಂದು ವೇಳೆ ನಾವು ಬೇಡವೆಂದರೆ ಮುನಿಸಿಕೊಳ್ಳುತ್ತಾರೆ. ಈಗ ಅವೆಲ್ಲ ಚರ್ಚೆಗಿಂತ ಹೆಚ್ಚಾಗಿ ಆತನ ವಂಚನೆಯ ಜಾಲ ಹೊರಬೇಕು. ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.