ADVERTISEMENT

ಅಮೆರಿಕ ವಿಮಾನನಿಲ್ದಾಣದಲ್ಲಿ ಉತ್ತರಪ್ರದೇಶದ ಸಚಿವರಿಗೆ ತಡೆ, ಭಾರತದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 11:19 IST
Last Updated 26 ಏಪ್ರಿಲ್ 2013, 11:19 IST

ವಾಷಿಂಗ್ಟನ್ (ಐಎಎನ್‌ಎಸ್): ಬಾಸ್ಟನ್ ವಿಮಾನನಿಲ್ದಾಣದಲ್ಲಿ ಉತ್ತರಪ್ರದೇಶದ ನಗರಾಭಿವೃದ್ದಿ ಸಚಿವ  ಮಹಮ್ಮದ್ ಆಜಂಖಾನ್ ಅವರನ್ನು 10 ನಿಮಿಷಗಳ ಕಾಲ ತಡೆದು ಪ್ರಶ್ನಿಸಿದ ಅಧಿಕಾರಿಗಳ ಕ್ರಮಕ್ಕೆ ಭಾರತ ಶುಕ್ರವಾರ  ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ.

ಆಜಂಖಾನ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೊಂದಿಗೆ ಇಲ್ಲಿನ ಹಾವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಮಹಾಕುಂಭಮೇಳಕ್ಕೆ ಸಂಬಂಧಪಟ್ಟಂತೆ ಉಪನ್ಯಾಸವನ್ನು ನೀಡಲೆಂದು ಅವರು ಇಲ್ಲಿಗೆ ಬಂದಿದ್ದರು.

ವಿಮಾನನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಮಹಿಳಾ ಅಧಿಕಾರಿಯೊಬ್ಬರು ಆಜಂಖಾನ್ ಅವರನ್ನು ತಡೆದು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ 10 ನಿಮಿಷಗಳ ಕಾಲ ಪ್ರಶ್ನಿಸಿದರು.

ಇದರಿಂದ ಕುಪಿತಗೊಂಡ ಸಚಿವರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ತಮ್ಮನ್ನು ಮುಸ್ಲಿಂ ಎಂಬ ಕಾರಣಕ್ಕೆ ಈ ರೀತಿ ತಡೆಯಲಾಗಿದ್ದು, ಇದಕ್ಕೆ ಅಧಿಕಾರಿಗಳು ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದರು. ಆದರೆ ತಮ್ಮ ಕರ್ತವ್ಯವನ್ನಷ್ಟೆ ತಾವು ಪಾಲಿಸಿರುವುದಾಗಿ ಅಧಿಕಾರಿಗಳು ಹೇಳಿದಾಗ ಕ್ಷಣಕಾಲ ಉಭಯತ್ರಯರ ನಡುವೆ ವಾಗ್ವಾದ ಆರಂಭವಾಯಿತು. ಮಧ್ಯ ಪ್ರವೇಶಿಸಿದ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇದರಿಂದ ಬೇಸತ್ತ ಆಜಂಖಾನ್ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಈ ವಿಷಯವನ್ನು ಸಂಸತ್ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ಸದಸ್ಯರು ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದ್ದರಿಂದ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ಈಗಾಗಲೇ ಈ ರೀತಿ ಅಮೆರಿಕ ವಿಮಾನನಿಲ್ದಾಣದಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಚಿತ್ರ ನಟ ಶಾರೂಕ್‌ಖಾನ್, ರಾಯಭಾರಿ ಮೀರಾಶಂಕರ್ ಅವಮಾನ ಅನುಭವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.