ADVERTISEMENT

ಎರಡನೇ ಸುತ್ತಿನ ಬಾಹ್ಯಾಕಾಶ ಸಾಹಸ: ಸುನೀತಾ ವಿಲಿಯಮ್ಸ್ ಪಯಣ ಆರಂಭ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 6:30 IST
Last Updated 15 ಜುಲೈ 2012, 6:30 IST
ಎರಡನೇ ಸುತ್ತಿನ ಬಾಹ್ಯಾಕಾಶ ಸಾಹಸ: ಸುನೀತಾ ವಿಲಿಯಮ್ಸ್ ಪಯಣ ಆರಂಭ
ಎರಡನೇ ಸುತ್ತಿನ ಬಾಹ್ಯಾಕಾಶ ಸಾಹಸ: ಸುನೀತಾ ವಿಲಿಯಮ್ಸ್ ಪಯಣ ಆರಂಭ   

ವಾಷಿಂಗ್ಟನ್ (ಪಿಟಿಐ): ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 2006ರಲ್ಲಿ ಆರು ತಿಂಗಳ ಕಾಲ ವಾಸಿಸಿ ಕಾರ್ಯ ನಿರ್ವಹಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ತಮ್ಮ ಎರಡನೇ ಸುತ್ತಿನ ಬಾಹ್ಯಾಕಾಶ ಸಾಹಸಕ್ಕಾಗಿ ಭಾನುವಾರ ಕಝಕಸ್ತಾನ್ ದಿಂದ ಗಗನಕ್ಕೆ ಏರಿದರು.

46ರ ಹರೆಯದ ವಿಲಿಯಮ್ಸ್ ಅವರು ಕಝಕಸ್ತಾನ್ ನಲ್ಲಿ ಇರುವ ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 8.10ರ ವೇಳೆಗೆ ಫ್ಲೈಟ್ ಎಂಜಿನಿಯರ್ ಗಳಾದ ರಷ್ಯದ ಫೆಡರಲ್ ಸ್ಪೇಸ್ ಏಜೆನ್ಸಿಯ ಯೂರಿ ಮಾಲೆಂಚೆಂಕೊ ಮತ್ತು ಜಪಾನ್ ಗಗನಯಾನ ಸಂಶೋಧನಾ ಸಂಸ್ಥೆಯ ಅಕಿಹಿಕೊ ಹೊಶ್ದಿ ಅವರೊಂದಿಗೆ ಬಾಹ್ಯಾಕಾಶ ಯಾನವನ್ನು ಆರಂಭಿಸಿದರು ಎಂದು ನಾಸಾ ತಿಳಿಸಿದೆ.

ಈ ಮೂವರು ಗಗನಯಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ಎಕ್ಸ್ ಪೆಡಿಷನ್ 32 ಸಿಬ್ಬಂದಿಯ ಜೊತೆಗೆ ಸೇರಿಕೊಳ್ಳಲಿದ್ದಾರೆ.

ಫ್ಲೈಟ್ ಎಂಜಿನಿಯರ್ ಆಗಿರುವ ಸುನೀತಾ ವಿಲಿಯಮ್ಸ್ ಅವರು ಮತ್ತು ಅವರ ಸಹಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ವಾಸದ ಅವಧಿಯಲ್ಲಿ ಎರಡು ಬಾರಿ ಗಗನ ನಡಿಗೆ, ವೈಜ್ಞಾನಿಕ ಸಂಶೋಧನೆ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ನಾಸಾ ಹೇಳಿದೆ.

ಮೂಲತಃ ಗುಜರಾತಿನ ನಿವಾಸಿಯ ಪುತ್ರಿಯಾದ ವಿಲಿಯಮ್ಸ್ 1998ರಲ್ಲಿ ನಾಸಾದಿಂದ ಗಗನಯಾನಿಯಾಗಿ ಆಯ್ಕೆಯಾಗಿದ್ದರು. ಬಾಹ್ಯಾಕಾಶ ಯಾನ ತಂಡ 14 ಮತ್ತು 15ರ ಸದಸ್ಯರಾಗಿ ನಿಯೋಜನೆಗೊಂಡ ಅವರು ಬಳಿಕ 15ನೇ ತಂಡಕ್ಕೂ ಸೇರ್ಪಡೆಯಾಗಿದ್ದರು. ಅತಿ ದೀರ್ಘಕಾಲ ಬಾಹ್ಯಾಕಾಶ ವಾಸ (195 ದಿನಗಳು) ಮಾಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಫ್ಲಾರಿಡಾ ತಂತ್ರಜ್ಞಾನ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪಡೆದಿರುವ ಸುನೀತಾ ಬಾಹ್ಯಾಕಾಶದಲ್ಲಿ 33ನೇ ಸಾಹಸ ತಂಡದಲ್ಲಿ ಕಮಾಂಡರ್ ಪದವಿಗೆ ಏರುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.