ADVERTISEMENT

ಐ.ಟಿ ಉದ್ಯಮ ತೀವ್ರ ವಿರೋಧ

ಎಚ್4 ವೀಸಾ ನಿಯಮ ಹಿಂಪಡೆಯಲು ಟ್ರಂಪ್ ಆಡಳಿತದ ಚಿಂತನೆ

ಪಿಟಿಐ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಐ.ಟಿ ಉದ್ಯಮ ತೀವ್ರ ವಿರೋಧ
ಐ.ಟಿ ಉದ್ಯಮ ತೀವ್ರ ವಿರೋಧ   

ವಾಷಿಂಗ್ಟನ್: ಎಚ್1ಬಿ ವೀಸಾದಾರರ ಸಂಗಾತಿಗಳು (ಪತಿ ಅಥವಾ ಪತ್ನಿ) ಕೆಲಸ ಮಾಡಲು ಅವಕಾಶ ಮಾಡಿಕೊಡುವ ಎಚ್4 ವೀಸಾವನ್ನು ರದ್ದು ಮಾಡುವ ಅಮೆರಿಕ ಸರ್ಕಾರದ ಚಿಂತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪ್ರಭಾವಿ ಜನಪ್ರತಿನಿಧಿಗಳು ಮತ್ತು ಅಮೆರಿಕದ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ದಿಮೆಯ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘ಸದ್ಯ ಇರುವ ನಿಯಮ ಕೈಬಿಟ್ಟು, ಅಮೆರಿಕ ಉದ್ದಿಮೆ ಕ್ಷೇತ್ರದಲ್ಲಿರುವ ಸಾವಿರಾರು ಜನರ ಉದ್ಯೋಗ ಕಸಿಯುವುದರಿಂದ ಅವರ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜತೆಗೆ ನಮ್ಮ ಅರ್ಥ ವ್ಯವಸ್ಥೆ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ’‍ ಎಂದು ಎಫ್‌ಡಬ್ಲ್ಯುಡಿ.ಯುಎಸ್ ತಂತ್ರಜ್ಞಾನ ಸಮುದಾಯವು ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ADVERTISEMENT

ಫೇಸ್‌ಬುಕ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ಗಳಂಥ ಐ.ಟಿ ದಿಗ್ಗಜ ಸಂಸ್ಥೆಗಳು ಎಫ್‌ಡಬ್ಲ್ಯುಡಿ.ಯುಎಸ್ ಅನ್ನು ಹುಟ್ಟುಹಾಕಿವೆ.

‘ಎಚ್4 ವೀಸಾ ನೀಡುವುದು ಅತ್ಯಂತ ಉಪಯುಕ್ತ ಕ್ರಮ. ತಮ್ಮ ಗಂಡ ಅಥವಾ ಹೆಂಡತಿಗೆ ಅಮೆರಿಕದ ಕಾಯಂ ನಿವಾಸಿ ಸ್ಥಾನ ಸಿಗುವವರೆಗೆ ಅವರ ಸಂಗಾತಿ ಕೆಲಸಕ್ಕಾಗಿ ಕಾಯುವ ಅಗತ್ಯವಿಲ್ಲ’ ಎಂದು ಆಂತರಿಕ ಭದ್ರತಾ ಕಾರ್ಯದರ್ಶಿ ಕರ್ಸ್ಟ್‌ಜೆನ್ ಎಂ. ನೀಲ್ಸನ್ ಅವರಿಗೆ ಎಫ್‌ಡಬ್ಲ್ಯುಡಿ.ಯುಎಸ್ ಬರೆದ ಪತ್ರದಲ್ಲಿ ತಿಳಿಸಿದೆ.

‘ಎಚ್4 ವೀಸಾ ‍ಪಡೆದವರಲ್ಲಿ ಶೇ 80 ಮಹಿಳೆಯರು ಮತ್ತು ಬಹುತೇಕರು ಅಮೆರಿಕಕ್ಕೆ ಬರುವುದಕ್ಕೂ ಮುನ್ನ ಪದವಿ ಪಡೆದಿದ್ದಾರೆ. ಅವರೆಲ್ಲ ಒಳ್ಳೆಯ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಅದು ಹೇಳಿದೆ.

‘ಎಚ್4 ವೀಸಾ ಇಲ್ಲದೇ ಇವರು ಅಧಿಕೃತವಾಗಿ ಉದ್ಯೋಗ ಮಾಡಲಾಗದು. ತಮ್ಮ ಸಮುದಾಯಕ್ಕೆ ಕೊಡುಗೆ ನೀಡಲು ಸಾಧ್ಯವಾಗುವುದಿಲ್ಲ ಮತ್ತು ಅವರ ವೇತನಕ್ಕೆ ತೆರಿಗೆ ವಿಧಿಸುವುದೂ ಸಾಧ್ಯವಿಲ್ಲ. ಕೆಲವರು ತಮ್ಮ ವೇತನವನ್ನೇ ಹೂಡಿಕೆ ಮಾಡಿ, ಉದ್ದಿಮೆಗಳನ್ನು ಸ್ಥಾಪಿಸಿ ಅಮೆರಿಕನ್ನರಿಗೆ ಉದ್ಯೋಗ ನೀಡಿದ್ದಾರೆ. ಈಗ ಅವರು ಅವಕಾಶ ವಂಚಿತರಾದರೆ ನಮ್ಮ ಆರ್ಥಿಕ ಬೆಳವಣಿಗೆಗೆ ಪೆಟ್ಟು ಬೀಳುತ್ತದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

‘ಅಂದಾಜು 1 ಲಕ್ಷ ಜನರ ಉದ್ಯೋಗಕ್ಕೆ ಎಚ್4 ಅವಕಾಶ ಕೊಟ್ಟಿದೆ ಎಂದು ಕ್ಯಾಲಿಫೋರ್ನಿಯಾದ ಪ್ರಮುಖ 15 ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ’ ಎಂದು ಪತ್ರದಲ್ಲಿ ಹೇಳಿದೆ.

ಎಚ್4 ವೀಸಾ ಹೊಂದಿರುವವರು ಉದ್ಯೋಗ ಮಾಡುವ ಅವಕಾಶ ಮೊಟಕುಗೊಳಿಸುವ ಪ್ರಸ್ತಾವ ಡೊನಾಲ್ಡ್ ಟ್ರಂಪ್ ಆಡಳಿತದ ಮುಂದಿದೆ. ಇದರಿಂದ ಭಾರತೀಯರಿಗೆ ಹೆಚ್ಚು ಪ್ರತಿಕೂಲವಾಗಲಿದೆ.

ಅಧಿಕಾರಿಗಳ ಜೊತೆ ಚರ್ಚೆ
ಭಾರತೀಯರ ಮೇಲೆ ಪರಿಣಾಮ ಬೀರುವ ಕಾರಣಕ್ಕೆ ಇಲ್ಲಿರುವ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ಅಮೆರಿಕದ ಜನಪ್ರತಿನಿಧಿಗಳು ಮತ್ತು ಟ್ರಂಪ್ ಸರ್ಕಾರದ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿದ್ದಾರೆ.

ಮಹಿಳೆಯರಿಗೆ ತೊಂದರೆ: ‘ಟ್ರಂಪ್ ಸರ್ಕಾರದ ನೀತಿಯಿಂದಾಗಿ ನನ್ನಂಥ ಅನೇಕ ಮಹಿಳೆಯರು ತೊಂದರೆ ಅನುಭವಿಸಬೇಕಾಗುತ್ತದೆ. ಮುಂದಿನ ಪೀಳಿಗೆಯ ಒಳಿತಿಗಾಗಿ ಅಮೆರಿಕಕ್ಕೆ ನೆರವಾಗುವಂಥ ಕಾನೂನುಬದ್ಧ ವಲಸೆಯನ್ನು ನಾವು ಪ್ರೋತ್ಸಾಹಿಸಬೇಕು’ ಎಂದು ಎಚ್4 ವೀಸಾ ಹೊಂದಿರುವ ಉದ್ಯಮಿ ಡಾ. ಮರಿಯಾ ನವಾಸ್ ಮೊರೆನೊ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.