ADVERTISEMENT

ಕೊಲ್ಲಿ ರಾಷ್ಟ್ರ ಸೇರಿದ ಮುಬಾರಕ್ ಹಣ!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 16:55 IST
Last Updated 14 ಫೆಬ್ರುವರಿ 2011, 16:55 IST
ಕೊಲ್ಲಿ ರಾಷ್ಟ್ರ ಸೇರಿದ ಮುಬಾರಕ್ ಹಣ!
ಕೊಲ್ಲಿ ರಾಷ್ಟ್ರ ಸೇರಿದ ಮುಬಾರಕ್ ಹಣ!   

ನ್ಯೂಯಾರ್ಕ್ (ಪಿಟಿಐ): ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ ಹಾಗೂ ಅವರ ಕುಟುಂಬಕ್ಕೆ ಸೇರಿದ ಖಾತೆಗಳ ಸ್ಥಗಿತಕ್ಕೆ ಸ್ವಿಸ್ ಅಧಿಕಾರಿಗಳು ಮುಂದಾದ ಬೆನ್ನಲ್ಲೇ, ಮಾಜಿ ಅಧ್ಯಕ್ಷರು ಭಾರಿ ಮೊತ್ತದ ಹಣವನ್ನು ಯೂರೋಪ್‌ನ ಬ್ಯಾಂಕುಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.

‘ಈ ಹಣವನ್ನು ಉಳಿಸಿಕೊಳ್ಳಲು ಮುಬಾರಕ್ ಕುಟುಂಬ ತುರ್ತು ಕ್ರಮಗಳಿಗೆ ಮುಂದಾಗಿರುವುದು ನಮ್ಮ ಅರಿವಿಗೆ ಬಂದಿದೆ’ ಎಂದು ಗುಪ್ತಚರ ದಳದ ಹಿರಿಯ ಅಧಿಕಾರಿಯೊಬ್ಬರು ಇರಾನ್‌ನ ಸರ್ಕಾರಿ ಸ್ವಾಮ್ಯದ ‘ಪ್ರೆಸ್ ಟಿವಿ’ ವಾಹಿನಿಗೆ ತಿಳಿಸಿದ್ದಾರೆ.

ಮುಬಾರಕ್ ತಮ್ಮೊಂದಿಗೆ ಸ್ನೇಹದಿಂದಿರುವ ಸಂಯುಕ್ತ ಅರಬ್ ಒಕ್ಕೂಟ, ಸೌದಿ ಅರೇಬಿಯಾದಂತಹ ರಾಷ್ಟ್ರಗಳಿಗೆ ಹಣವನ್ನು ಸ್ಥಳಾಂತರಿಸಿದ್ದಾರೆ ಎಂದು ಈ ವಾಹಿನಿ ತಿಳಿಸಿದೆ.

‘ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಮುಬಾರಕ್ ಅವರ ಆಸ್ತಿಪಾಸ್ತಿಯ ಮೊತ್ತದ ಬಗ್ಗೆ ವಿಭಿನ್ನ ವದಂತಿಗಳಿವೆ. ಒಟ್ಟು ಮೌಲ್ಯ 70 ಶತಕೋಟಿ ಡಾಲರ್ ಎಂದು ಒಂದು ಮೂಲ ಹೇಳಿದರೆ, ಮೊತ್ತ 2ರಿಂದ 3 ಶತಕೋಟಿ ಡಾಲರ್‌ನ ನಡುವೆ ಇದೆ ಎಂದು ಅಮೆರಿಕದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಮುಬಾರಕ್ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ಅವರ ಕುಟುಂಬ ಮತ್ತು ಸಹಚರರಿಗೆ ಸೇರಿದ ಆಸ್ತಿಪಾಸ್ತಿಯನ್ನು ಸ್ಥಗಿತಗೊಳಿಸುವಂತೆ ಸ್ವಿಸ್ ಅಧಿಕಾರಿಗಳು ಸ್ವಿಟ್ಜರ್‌ಲೆಂಡ್‌ನ ಎಲ್ಲ ಬ್ಯಾಂಕುಗಳಿಗೂ ಆದೇಶಿಸಿದ್ದರು. ಈ ಆಸ್ತಿಪಾಸ್ತಿಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಈಜಿಪ್ಟ್‌ನ ವಿರೋಧ ಪಕ್ಷದ ನಾಯಕರು ಸಹ ಪಣ ತೊಟ್ಟಿದ್ದಾರೆ.
‘ಮಾಜಿ ಅಧ್ಯಕ್ಷರು ಮತ್ತು ಸಚಿವರ ಕುಟುಂಬದ ಆಸ್ತಿಪಾಸ್ತಿಯ ಬಗ್ಗೆಯೂ ನಾವು ತನಿಖೆ ನಡೆಸುತ್ತೇವೆ’ ಎಂದು ವಿರೋಧ ಪಕ್ಷದ ಅಂಗ ಸಂಸ್ಥೆಯಾದ ನ್ಯಾಷನಲ್ ಅಸೋಸಿಯೇಷನ್ ಫಾರ್ ಚೇಂಜ್ ಮುಖ್ಯಸ್ಥ ಜಾರ್ಜ್ ಇಶಾಕ್ ತಿಳಿಸಿದ್ದಾರೆ. ಮುಬಾರಕ್ ಕುಟುಂಬ ದೇಶದ ಆರ್ಥಿಕತೆಯೊಂದಿಗೆ ತಳಕು ಹಾಕಿಕೊಂಡಿದೆ. ಈಜಿಪ್ಟ್‌ನ ವ್ಯಾಪಾರ ವಹಿವಾಟು ಈ ಕುಟುಂಬಕ್ಕೆ ಸೇರಿದ ಸಣ್ಣ ಗುಂಪೊಂದರ ಮೂಲಕ ರಹಸ್ಯವಾಗಿ ನಡೆಯುವುದರಿಂದ ಅದರ ಆಸ್ತಿಪಾಸ್ತಿಯ ಒಟ್ಟು ಮೌಲ್ಯವನ್ನು ಕಲೆಹಾಕುವುದು ಕಷ್ಟದ ಕಾರ್ಯ ಎಂದೇ ಹೇಳಲಾಗುತ್ತಿದೆ.

1990ರಲ್ಲಿ ಈಜಿಪ್ಟ್‌ನ ಆರ್ಥಿಕತೆ ಖಾಸಗೀಕರಣಗೊಂಡ ಬಳಿಕ, ಮುಬಾರಕ್ ಹಾಗೂ ಇತರ ಗಣ್ಯರಿಗೆ ಸೇರಿದ ಕುಟುಂಬಗಳೇ ಸರ್ಕಾರಿ ಆಸ್ತಿಪಾಸ್ತಿಯ ಮಾರಾಟ, ಹೊಸ ವಹಿವಾಟುಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿವೆ.

ಮುಬಾರಕ್ ಅವರ ಕಿರಿಯ ಪುತ್ರ ಗಮಾಲ್ ಅವರು 1990ರಲ್ಲಿ ಲಂಡನ್‌ನಲ್ಲಿರುವ ಬ್ಯಾಂಕ್ ಆಫ್ ಅಮೆರಿಕದ ಕೆಲಸವನ್ನು ತ್ಯಜಿಸಿ ಸ್ವದೇಶದ ಬೃಹತ್ ಬಂಡವಾಳ ಹೂಡಿಕೆ ಬ್ಯಾಂಕ್ ಸೇರಿದ್ದರು.

 ದೇಶದ ಆರ್ಥಿಕತೆಗೆ ಕಾರಣವಾದ ಕೃಷಿ, ಪ್ರವಾಸೋದ್ಯಮ, ಕಾರ್ಪೊರೇಟ್‌ನಂತಹ ಹಲವು ವಲಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಖಾಸಗಿ ಕಂಪೆನಿಯಲ್ಲಿ ಈಗ ಅವರು ಪ್ರಮುಖ ಷೇರುದಾರರಾಗಿದ್ದಾರೆ.

ಅಲ್ಲದೆ ಅವರ ಕುಟುಂಬವು ರಿಯಲ್ ಎಸ್ಟೇಟ್‌ನಲ್ಲೂ ಸಾಕಷ್ಟು ಹಿಡಿತ ಹೊಂದಿದೆ ಎಂದು ಹೇಳಲಾಗಿದೆ. ಆದರೆ, ಈಜಿಪ್ಟ್‌ನ ಹೊರಭಾಗದಲ್ಲಿ ಪತ್ತೆಯಾಗಿರುವ ಮುಬಾರಕ್ ಕುಟುಂಬಕ್ಕೆ ಸೇರಿದ ಏಕೈಕ ಆಸ್ತಿಯೆಂದರೆ ಗಮಾಲ್ ಅವರು ಲಂಡನ್‌ನ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ ನೈಟ್ಸ್‌ಬ್ರಿಡ್ಜ್‌ನಲ್ಲಿ ಹೊಂದಿದ್ದ ಮನೆ.

ಹೋಸ್ನಿ ಅಸ್ವಸ್ಥ
ಮಾಸ್ಕೊ, (ಐಎಎನ್‌ಎಸ್/ಆರ್‌ಐಎ ನೊವೊಸ್ಟಿ):
ಈಜಿಪ್ಟ್‌ನ ಮಾಜಿ ಅಧ್ಯಕ್ಷ  ಹೋಸ್ನಿ ಮುಬಾರಕ್ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಮಾಧ್ಯ ಮಗಳ ವರದಿ ತಿಳಿಸಿದೆ.
82 ವರ್ಷದ ಮುಬಾರಕ್ ಅವರು ಮಾನಸಿಕವಾಗಿ ತೀವ್ರ ಬಳಲಿದ್ದಾರೆ. ಆದರೆ ಕೋಮಾ ಸ್ಥಿತಿಯಲ್ಲಿಲ್ಲ ಎಂದು ಮುಬಾರಕ್ ಅವರ ಆಪ್ತ ವಲಯದ ಮೂಲಗಳನ್ನು ಉಲ್ಲೇಖಿಸಿ ಸರ್ಕಾರಿ ಪರ ಮಾಧ್ಯಮ ‘ಅಲ್‌ಗೊಮ್ಹುರಿಯಾ’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT