ಲಂಡನ್ (ಪಿಟಿಐ): ವಾಯವ್ಯ ಭಾರತದಲ್ಲಿ ಹಠಾತ್ತಾಗಿ ಮುಂಗಾರು ದುರ್ಬಲ ಗೊಂಡದ್ದೇ 4,000 ವರ್ಷಗಳ ಹಿಂದೆ ಸಿಂಧೂ ಕಣಿವೆ ನಾಗರಿಕತೆ ಕುಸಿಯಲು ಕಾರಣ ಎಂದು ಪ್ರಾಚೀನ ನಾಗರಿಕತೆಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗೆಗಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.
ಸಿಂಧೂ ಕಣಿವೆ ನಗರೀಕರಣಗೊಳ್ಳುತ್ತಿದ್ದ ಆರಂಭಿಕ ದಿನಗಳಲ್ಲಿ ಮುಂಗಾರು ದುರ್ಬಲಗೊಂಡಿದ್ದರಿಂದಾಗಿ ತೀವ್ರ ಕ್ಷಾಮ ಉಂಟಾಯಿತು.
ಈಶಾನ್ಯ ಭಾರತದ ಮೇಘಾಲಯ, ಒಮಾನ್ ಮತ್ತು ಅರಬ್ಬಿ ಸಮುದ್ರಗಳ ಪುರಾವೆಗಳನ್ನೂ ಒಟ್ಟಾಗಿ ಇಟ್ಟು ನೋಡಿದಾಗ ಭಾರತದ ದೊಡ್ಡ ಭೂಪ್ರದೇಶದಲ್ಲಿ ಮುಂಗಾರು ದುರ್ಬಲಗೊಂಡಿರುವುದು ದೃಢವಾಗುತ್ತದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಡೇವಿಡ್ ಹೊಡೆಲ್ ಹೇಳಿದ್ದಾರೆ.
ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದ ಜನರು ಚದುರಿ ಹೋಗಿರುವುದು ನಿಜ. ಆದರೆ ಯಾವುದಾದರೂ ಒಂದೇ ಕಾರಣದಿಂದ ಹಾಗೆ ಆಗಿರಬಹುದು ಎಂದು ಹೇಳುವುದು ಅಸಾಧ್ಯ. ಆದರೆ ಹವಾಮಾನ ಬದಲಾವಣೆ ಒಂದು ಮುಖ್ಯವಾದಕಾರಣವಂತೂ ಹೌದು ಎಂದು ಅವರು ವಿಶ್ಲೇಷಿಸಿದ್ದಾರೆ.
ಬ್ರಿಟನ್– ಭಾರತ ಶಿಕ್ಷಣ ಮತ್ತು ಸಂಶೋಧನಾ ಉಪಕ್ರಮ ಈ ಅಧ್ಯಯನಕ್ಕೆ ಅನುದಾನ ಒದಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.