ADVERTISEMENT

ಖಾಲೀದಾ ಜಿಯಾ ವಿರುದ್ಧ ದೇಶದ್ರೋಹ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 7:14 IST
Last Updated 25 ಜನವರಿ 2016, 7:14 IST
ಖಾಲೀದಾ ಜಿಯಾ ವಿರುದ್ಧ ದೇಶದ್ರೋಹ ಮೊಕದ್ದಮೆ
ಖಾಲೀದಾ ಜಿಯಾ ವಿರುದ್ಧ ದೇಶದ್ರೋಹ ಮೊಕದ್ದಮೆ   

ಢಾಕಾ (ಪಿಟಿಐ): ಬಾಂಗ್ಲಾದೇಶದ ಮಾಜಿ ಪ್ರಧಾನಿಯೂ ಆಗಿರುವ ವಿರೋಧ ಪಕ್ಷದ ನಾಯಕಿ ಖಾಲೀದಾ ಜಿಯಾ ಅವರ ವಿರುದ್ಧ ಸೋಮವಾರ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಬಾಂಗ್ಲಾದೇಶ ವಿಮೋಚನಾ ಚಳವಳಿಯ ಹುತಾತ್ಮರ ಕುರಿತು ‘ನಿಂದನೆಯ ಮಾತು’ಗಳನ್ನಾಡಿದ ಆರೋಪದಡಿ ಈ ಪ್ರಕರಣ ದಾಖಲಿಸಲಾಗಿದೆ.

ಗೃಹ ಸಚಿವಾಲಯವು ಜಿಯಾ ಅವರ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ADVERTISEMENT

‘ಢಾಕಾದ ಮುಖ್ಯಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ ಎದುರು ಸೋಮವಾರ ಬೆಳಿಗ್ಗೆ ಜಿಯಾ ವಿರುದ್ಧ ಈ ಪ್ರಕರಣ ದಾಖಲಾಗಿದೆ.  ಅವರನ್ನು ಬಂಧಿಸುವಂತೆ ಮನವಿ ಮಾಡಲಾಗಿದೆ’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅರ್ಜಿ ವಿಚಾರಣೆಗೆ ನ್ಯಾಯಾಲಯ ಒಪ್ಪಿಕೊಂಡಿದೆ ಎಂದೂ ಅವರು ತಿಳಿಸಿದ್ದಾರೆ.

2015ರ ಡಿಸೆಂಬರ್ 21ರಂದು ಚರ್ಚೆಯೊಂದರಲ್ಲಿ ಮಾತನಾಡುತ್ತ ಖಾಲೀದಾ ಜಿಯಾ ಅವರು 1971ರ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ಅಂಕಿ ಅಂಶಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದರು.

‘ವಿಮೋಚನಾ ಹೋರಾಟದಲ್ಲಿ ಹುತಾತ್ಮರಾದವರೆಷ್ಟು ಎಂಬುದರ ಕುರಿತು ವಿವಾದಗಳಿವೆ. ಈ ಕುರಿತು ಹಲವು ಪುಸ್ತಕಗಳು ಹಾಗೂ ದಾಖಲೆಗಳೂ ಇವೆ’ ಎಂದಿದ್ದರು.

70 ವರ್ಷದ ಜಿಯಾ ಅವರ ಬಿಎನ್‌ಪಿ ಪಕ್ಷವು ಮೂಲಭೂತವಾದಿ ಜಮಾತೇ ಇಸ್ಲಾಮಿಯ ನಿರ್ಣಾಯಕ ಅಂಗಪಕ್ಷವಾಗಿದೆ. ಇಸ್ಲಾಮಿ ಪಕ್ಷವು ಪಾಕಿಸ್ತಾನದಿಂದ ಬಾಂಗ್ಲಾದೇಶದ ವಿಮೋಚನಾ ಚಳವಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಬಾಂಗ್ಲಾದೇಶ ದಂಡ ಸಂಹಿತೆಯ 123 (ಎ) ಕಲಂ ಅಡಿಯಲ್ಲಿ ಜಿಯಾ ಅವರ ವಿರುದ್ಧ ದೇಶದ್ರೋಹ ಪ್ರಕರಣದ ದಾಖಲಿಸಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ವಕೀಲರಾದ ಮಮ್ತಾಜ್‌ ಉದ್ದೀನ್‌ ಅಹ್ಮದ್ ಮೆಹೆದಿ ಅವರು ಡಿಸೆಂಬರ್ 27ರಂದು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.