ADVERTISEMENT

ಗಿಲಾನಿ ಸ್ಥಾನಕ್ಕೆ ಕಂಟಕ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ವಿರುದ್ಧ ಸುಪ್ರೀಂಕೋರ್ಟ್ ಸೋಮವಾರ ದೋಷಾರೋಪ ನಿಗದಿ ಮಾಡಿದೆ. ಇದರಿಂದ ಗಿಲಾನಿ ಅವರ ಅಧಿಕಾರಕ್ಕೆ ಕುತ್ತು ಬರುವ ಸಂಭವ ಇನ್ನೂ ಹೆಚ್ಚಳವಾಗಿದೆ.

ಅಧಿಕಾರದಲ್ಲಿ ಇರುವಾಗಲೇ ನ್ಯಾಯಾಲಯದಿಂದ `ತಪ್ಪಿ ತಸ್ಥ~ ಎಂಬ ದೋಷಾರೋಪಕ್ಕೆ ಗುರಿಯಾದ ಪಾಕ್‌ನ ಮೊದಲ ಪ್ರಧಾನಿ ಇವರಾಗಿದ್ದಾರೆ.

ಈ ದೋಷಾರೋಪ ಸಾಬೀತಾದರೆ ಗಿಲಾನಿ ಆರು ತಿಂಗಳ ಕಾಲ ಸಜೆಗೆ ಗುರಿಯಾಗುತ್ತಾರೆ ಮತ್ತು ಯಾವುದೇ ಅಧಿಕಾರಯುತ ಪದವಿಗೆ ಐದು ವರ್ಷಗಳ ಕಾಲ ಅನರ್ಹರಾಗುತ್ತಾರೆ.

ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ತಕ್ಷಣವೇ ತಮ್ಮ ಸಂಸತ್ ಸದಸ್ಯತ್ವ ರದ್ದಾಗುತ್ತದೆ ಎಂದು ಗಿಲಾನಿ ಅವರೇ ಹೇಳಿದ್ದಾರೆ. ನ್ಯಾಯಮೂರ್ತಿ ನಾಸೀರ್-ಉಲ್-ಮುಲ್ಕ್ ನೇತೃತ್ವದ ಏಳು ಸದಸ್ಯರ ನ್ಯಾಯಪೀಠದ ಮುಂದೆ 59 ವರ್ಷ ವಯಸ್ಸಿನ ಪ್ರಧಾನಿ ಗಿಲಾನಿ ಹಾಜರಾದರು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಎರಡು ಪುಟಗಳ ದೋಷಾರೋಪವನ್ನು ಓದಿದ ನ್ಯಾಯಮೂರ್ತಿ ನಾಸೀರ್-ಉಲ್-ಮುಲ್ಕ್,  `ಓದಿಹೇಳಿದ್ದು ಮನವರಿಕೆ ಆಯಿತೆ~ ಎಂದು ಪ್ರಧಾನಿ ಅವರನ್ನು ಕೇಳಿದರು.

 `ಅರ್ಥವಾಗಿದೆ~ ಎಂದು ನ್ಯಾಯಪೀಠದ ಎದುರು ನಿಂತಿದ್ದ ಗಿಲಾನಿ ಪ್ರತಿ ಜವಾಬು ನೀಡಿದರು. `ಹಾಗಿದ್ದರೆ ತಪ್ಪು ಒಪ್ಪಿಕೊಳ್ಳುವಿರಾ?~ ಎಂದು ನ್ಯಾಯಮೂರ್ತಿಗಳು ಮತ್ತೆ ಪ್ರಶ್ನಿಸಿದರು. ಇದಕ್ಕೆ `ಇಲ್ಲ~ ಎಂದು ಪ್ರಧಾನಿ ಅವರು ನುಡಿದರು.

ನಂತರ ವಿಚಾರಣೆಯನ್ನು ಫೆ. 22ಕ್ಕೆ ಮುಂದೂಡಿದ ನ್ಯಾಯಮೂರ್ತಿ ನಾಸೀರ್-ಉಲ್-ಮುಲ್ಕ್, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇದೇ 16ರೊಳಗೆ ಸಲ್ಲಿಸುವಂತೆ ಅರ್ಟಾನಿ ಜನರಲ್ ಮೌಲ್ವಿ ಅನ್ವರುಲ್ ಹಕ್ ಅವರಿಗೆ ಸೂಚಿಸಿದರು. ಪ್ರಧಾನಿ ಪರ ವಕೀಲರಿಗೆ ಸಾಕ್ಷ್ಯಾಧಾರಗಳನ್ನು ಫೆ. 27ರೊಳಗೆ ಸಲ್ಲಿಸುವಂತೆ ಹೇಳಿದರು. ಅವುಗಳನ್ನು ಮರುದಿನ ದಾಖಲಿಸಿಕೊಳ್ಳಲಾಗುವುದು. ನಂತರ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದರು. ಮುಂದಿನ ವಿಚಾರಣೆ ವೇಳೆ ಪ್ರಧಾನಿ ಅವರ ಖುದ್ದು ಹಾಜರಿಗೆ ನ್ಯಾಯಪೀಠ ವಿನಾಯ್ತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.