ADVERTISEMENT

ಡಾ. ಬಾವಾಗೆ ಜಾಗತಿಕ ಸುಸ್ಥಿರ ಅಭಿವೃದ್ಧಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಗೆ ನೆರವಾಗುವ ವೈಜ್ಞಾನಿಕ ಸಾಧನೆ ಮಾಡಿರುವುದಕ್ಕಾಗಿ ಭಾರತೀಯ ಮೂಲದ ಜೀವವಿಜ್ಞಾನಿ ಡಾ. ಕಮಲ್ ಬಾವಾ ಅವರಿಗೆ ವಿಶ್ವದ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿ ಒಲಿದಿದೆ.

ಬಾಸ್ಟನ್‌ನಲ್ಲಿರುವ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದಲ್ಲಿ ಫ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಾವಾ ಅವರು ರಾಯಲ್ ನಾರ್ವೇಜಿಯನ್ ಸೊಸೈಟಿ ಆಫ್ ಸೈನ್ಸಸ್ ಆಂಡ್ ಲೆಟರ್ಸ್‌ (ಡಿಕೆಎನ್‌ವಿಎಸ್) ಮೊದಲಬಾರಿಗೆ ನೀಡಲಿರುವ `ಗನೆರಸ್ ಸುಸ್ಥಿರತೆ ಪ್ರಶಸ್ತಿ~ ಸ್ವೀಕರಿಸಲಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭವು ನಾರ್ವೆಯ ಟ್ರೊಂಡೀಮ್‌ನಲ್ಲಿ ಏಪ್ರಿಲ್ 17ರಂದು ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಪುರಸ್ಕಾರವು 86 ಲಕ್ಷ ರೂಪಾಯಿ ನಗದನ್ನು (10 ಲಕ್ಷ ನಾರ್ವೇಜಿಯನ್ ಕ್ರೌನ್) ಒಳಗೊಂಡಿದೆ.

`ಮೊದಲ ಗನೆರಸ್ ಪ್ರಶಸ್ತಿಗೆ ಇಂತಹ ಅತ್ಯಂತ ಅರ್ಹ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಿರುವುದು ನಮಗೆ ಹರ್ಷ ತಂದಿದೆ~ ಎಂದು ಡಿಕೆಎನ್‌ವಿಎಸ್‌ನ ಅಧ್ಯಕ್ಷ ಪ್ರೊ.ಕ್ರಿಸ್ಟಿಯನ್ ಫೊಶೀಮ್ ಹೇಳಿದ್ದಾರೆ.

ಗನೆರಸ್ ಪ್ರಶಸ್ತಿಯು ಜಾಗತಿಕವಾಗಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಅತ್ಯುನ್ನತ  ವೈಜ್ಞಾನಿಕ ಸಾಧನೆ ಮಾಡಿದವರಿಗೆ ನೀಡಲಾಗುತ್ತಿರುವ ಮೊತ್ತಮೊದಲ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ.

ಈ ವರ್ಷದಿಂದ ಆರಂಭಗೊಂಡು ಪ್ರತಿ ಎರಡು ವರ್ಷಕ್ಕೊಮ್ಮೆ ಈ ಪ್ರಶಸ್ತಿಯನ್ನು ಡಿಕೆಎನ್‌ವಿಎಸ್ ನೀಡಲಿದೆ.
ಬಾವಾ ಅವರು `ಮಳೆಕಾಡು ಪ್ರದೇಶಗಳಲ್ಲಿ ಜನಸಂಖ್ಯಾ ಜೀವಶಾಸ್ತ್ರ~ ಸೇರಿದಂತೆ ಹಲವು ಗಮನಾರ್ಹ ಸಂಶೋಧನೆಗಳನ್ನು ಮಾಡಿದ್ದಾರೆ.

ಭಾರತದ ಪಶ್ಚಿಮಘಟ್ಟಗಳಲ್ಲಿ, ಹಿಮಾಲಯ ಮತ್ತು ಕೇಂದ್ರ ಅಮೆರಿಕದ ಅರಣ್ಯ ಪ್ರದೇಶಗಳಲ್ಲಿ ಕೂಡ ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ.

ಡಾ. ಕಮಲ್ ಬಾವಾ ಅವರು ಬೆಂಗಳೂರಿನಲ್ಲಿರುವ ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಆಂಡ್ ದಿ ಎನ್ವಿರಾನ್‌ಮೆಂಟ್ (ಎಟಿಆರ್‌ಇಇ) ಸಂಸ್ಥೆಯ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ.

ತೀರಾ ಇತ್ತೀಚಿನವರೆಗೂ, ಹಾರ್ವರ್ಡ್ ವಿಶ್ವವಿದ್ಯಾಲಯವು ಸುಸ್ಥಿರ ವಿಜ್ಞಾನಕ್ಕಾಗಿ ನೀಡುವ ರಫೊಲೊ ಜಿಆರ್ಜಿಯೊ ಫೆಲೋಷಿಪ್ ಮತ್ತು ಬುಲರ್ಡ್ ಫೆಲೋಷಿಪ್‌ಗಳಿಗೂ ಅವರು ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.