ADVERTISEMENT

ನಿದ್ದೆಯಲ್ಲಿ ಹೋಯ್ತು ಕೋಟಿ ಕೋಟಿ!

ಕಂಪ್ಯೂಟರ್ ಕೀಲಿಮಣೆ ಮೇಲೆ ಕೈ ಇಟ್ಟು ಅಚಾತುರ್ಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಬರ್ಲಿನ್ (ಪಿಟಿಐ): ಜರ್ಮನ್ ಬ್ಯಾಂಕ್‌ನ ಉದ್ಯೋಗಿಯೊಬ್ಬ ತನ್ನ ಕಂಪ್ಯೂಟರ್‌ನ ಕೀಲಿ ಮಣೆ ಮೇಲೆಯೇ ನಿದ್ರಾದೇವಿಯ ತೆಕ್ಕೆಗೆ ಜಾರಿ,  29.4 ಕೋಟಿ   ಡಾಲರ್ ಹಣವನ್ನು ಆಕಸ್ಮಿಕವಾಗಿ ಬೇರೆ ಖಾತೆಗೆ ವರ್ಗಾಯಿಸಿದ್ದಾನೆ. ಇದರಿಂದಾಗಿ ಬ್ಯಾಂಕಿನ ಮೇಲ್ವಿಚಾರಕರು ಕೆಲಸ ಕಳೆದುಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮೇಲ್ವಿಚಾರಕರನ್ನು ಕೆಲಸದಿಂದ ತೆಗೆದುಹಾಕಿರುವುದು ತಪ್ಪು. ಬದಲಿಗೆ ಅವರಿಗೆ ಛೀಮಾರಿ ಹಾಕಬಹುದಿತ್ತು ಎಂದು ಜರ್ಮನಿಯ ಕಾರ್ಮಿಕ ನ್ಯಾಯಾಲಯ ಹೇಳಿದೆ.

ಘಟನೆ ವಿವರ: ಬ್ಯಾಂಕ್ ಉದ್ಯೋಗಿಯೊಬ್ಬ ಕೆಲಸದ ವೇಳೆಯಲ್ಲಿ ನಿದ್ರೆಗೆ ಜಾರಿ ಕೀಲಿ ಮಣೆ ಮೇಲೆ ಒರಗಿದ. ಇದರಿಂದಾಗಿ ಪಾವತಿಸಬೇಕಾಗಿದ್ದ 64.20 ಯುರೊಗಳ ಬದಲಿಗೆ ಆತನ ಬೆರಳು 222,222,222,22 ಸಂಖ್ಯೆಯನ್ನು ಒತ್ತಿದೆ. ಈ ಕಾರಣ ಆಕಸ್ಮಿಕವಾಗಿ ಅಮೆರಿಕದ 29.3 ಕೋಟಿ ಡಾಲರ್ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿತ್ತು. ಕೆಲಸದ ಒತ್ತಡದಲ್ಲಿ ಮೇಲ್ವಿಚಾರಕರು ಈ ವ್ಯವಹಾರವನ್ನು ಸರಿಯಾಗಿ ಪರಿಶೀಲಿಸದೆ ಅನುಮೋದಿಸಿದ್ದರಿಂದ ಕೆಲಸ ಕಳೆದುಕೊಂಡಿದ್ದರು.

ಈ ಘಟನೆ ನಡೆದಿದ್ದು ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ. ಆದರೆ, ಅದರ ವಿಚಾರಣೆ ಈಗ ನಡೆಯುತ್ತಿದೆ. ಈ ಎಲ್ಲಾ ವಿಷಯವನ್ನು ಆಲಿಸಿದ ನ್ಯಾಯಾಲಯ, ಮೇಲ್ವಿಚಾರಕರನ್ನು ಕೆಲಸದಿಂದ ವಜಾಗೊಳಿಸಿರುವುದು ಸೂಕ್ತವಲ್ಲ. ಅವರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.