ADVERTISEMENT

ನೇಪಾಳದಲ್ಲಿ ನದಿಗೆ ಬಸ್: 6 ಭಾರತೀಯರು ಸಾವು

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 10:33 IST
Last Updated 1 ಜನವರಿ 2014, 10:33 IST

ಕಠ್ಮಂಡು (ಪಿಟಿಐ): 10 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್‌ವೊಂದು ನದಿಗೆ ಉರುಳಿದ ಪರಿಣಾಮ ಆರು ಮಂದಿ ಸಾವನ್ನಪ್ಪಿ, ಹಲವರು ಗಾಯ ಘಟನೆ ತನಹುನ್ ಜಿಲ್ಲೆಯಲ್ಲಿ ನಡೆದಿದೆ.

ಜೀಪಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಭಾರತದ ಕೊಲ್ಕತ್ತಾ ಮೂಲದವರು. ಹೊಸ ವರ್ಷಾಚರಣೆಗೆ ಅವರು ತೆರಳುತ್ತಿದ್ದರು. ಜೀಪ್ ಪ್ರವಾಸಿ ನಗರಿ ಪೊಖರಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ರಾಜಧಾನಿ ಕಠ್ಮಂಡುವಿನಿಂದ 152 ಕಿ.ಮೀ. ದೂರದಲ್ಲಿರುವ ಬಂಡೀಪುರ ಗ್ರಾಮದಲ್ಲಿರುವ ಚುಂಪಹಾರಾ ಪ್ರದೇಶದ ಬಳಿ ಮಂಗಳವಾರ ರಾತ್ರಿ 11 ಗಂಟೆಯ ವೇಳೆಗೆ ಜೀಪು ಮಾರ್ಸಯಂಗಡಿ ನದಿಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೃತರನ್ನು ಬಿನಯ್ ಕುಮಾರ್ ತಿವಾರಿ (58), ಹೇಮಂತ್ ತಿರುಪತಿ (13), ಕಲಾವತಿ ತಿವಾರಿ (56), ಪೂನಂ ತಿರುಪತಿ (33), ನೇಹಾ ತಿರುಪತಿ (20) ಹಾಗೂ ಮಿಲಾನ್ ತಿರುಪತಿ (36) ಎಂದು ಗುರುತಿಸಲಾಗಿದೆ.

ಇಬ್ಬರು ಮಕ್ಕಳು ಸೇರಿದಂತೆ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಉದಯಪುರ ಜಿಲ್ಲೆಯ ದುಮ್ರೆಯಲ್ಲಿರುವ ಲಕ್ಷ್ಮಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮತ್ತೊಂದು ಘಟನೆ: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಸಲ್ಯಾನ್ ಜಿಲ್ಲೆಯಲ್ಲಿರುವ ನದಿಗೆ ಉರುಳಿ ಬಿದ್ದ ಪರಿಣಾಮ 11 ಜನರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಕಠ್ಮಂಡುವಿನಿಂದ ರುಕುಮ್‌ಗೆ ತೆರಳುತ್ತಿದ್ದ ಬಸ್‌, ಬಂಸ್ಕದಾ ಬಳಿ ಶಾರದಾ ನದಿಗೆ ಬೆಳಿಗ್ಗೆ ಉರುಳಿ ಈ ದುರ್ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.