ADVERTISEMENT

ನೇಪಾಳ- ನಾಲೆಗೆ ಉರುಳಿದ ಬಸ್:36 ಭಾರತೀಯರು ಸೇರಿ 39 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಕಠ್ಮಂಡು (ಪಿಟಿಐ):  ಕಿಕ್ಕಿರಿದು ತುಂಬಿದ್ದ ಬಸ್ ಇಳಿಜಾರು ಪ್ರದೇಶದಲ್ಲಿ ಚಾಲಕನ ಹಿಡಿತಕ್ಕೆ ಸಿಗದೆ ಪ್ರವಾಹದ ನೀರಿನಿಂದ ತುಂಬಿ ಹರಿಯುತ್ತಿದ್ದ ಗಂಡಕ್ ನಾಲೆಗೆ ಉರುಳಿ ಬಿದ್ದ ಪರಿಣಾಮ 36 ಭಾರತೀಯರು ಸೇರಿದಂತೆ 39 ಯಾತ್ರಾರ್ಥಿಗಳು ಮೃತಪಟ್ಟ ಘಟನೆ ದಕ್ಷಿಣ ನೇಪಾಳದಲ್ಲಿ ನಡೆದಿದೆ.

ಮೃತರಾದವರಲ್ಲಿ ಬಹುಪಾಲು ಜನ ಭಾರತೀಯರು. ಬಸ್ಸಿನಲ್ಲಿ ಸುಮಾರು 100ರಿಂದ 120 ಜನ ಹಿಂದೂ ಯಾತ್ರಾರ್ಥಿಗಳನ್ನು ತುಂಬಿದ್ದರು. ಮೃತಪಟ್ಟ ಬಹುತೇಕ ಭಾರತೀಯರು ಉತ್ತರ ಪ್ರದೇಶದ ನವಲ್‌ಪಾರಸಿ ಜಿಲ್ಲೆಯವರಾಗಿದ್ದಾರೆ.

ಗಂಡಕ್ ನಾಲೆ ಕಠ್ಮಂಡುವಿನಿಂದ 250 ಕಿಮೀ ದೂರದಲ್ಲಿದ್ದು, ಆ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಬಸ್ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಬಸ್ಸಿನ ಛಾವಣಿ ಮೇಲೂ ಜನರು  ಕುಳಿತು ಪ್ರಯಾಣಿಸುತ್ತಿದ್ದರು.

 ಯಾತ್ರಾರ್ಥಿಗಳು ತ್ರಿವೇಣಿ ಘಾಟ್‌ನಲ್ಲಿ ನಡೆಯುತ್ತಿದ್ದ ಬೋಲಬಮ್ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದರು. ಮೃತರಾದವರಲ್ಲಿ 10 ಜನ ಮಹಿಳೆಯರು, ಒಂದು ಹೆಣ್ಣು ಮಗು. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.