ADVERTISEMENT

ಲಿಬಿಯಾ: ಮಿಸರತದಲ್ಲಿ ಬಂಡುಕೋರರಿಗೆ ಜಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 19:00 IST
Last Updated 23 ಏಪ್ರಿಲ್ 2011, 19:00 IST

ಟ್ರಿಪೋಲಿ (ಪಿಟಿಐ): ಅಮೆರಿಕ ನೇತೃತ್ವದ ನ್ಯಾಟೊ ಮಿತ್ರಪಡೆ ಲಿಬಿಯಾದ ಮಿಸರತ ನಗರದ ಮೇಲೆ ದಾಳಿ ಹೆಚ್ಚಿಸಿರುವಂತೆಯೇ, ಇತ್ತ ಅಧ್ಯಕ್ಷ ಗಡಾಫಿ ಬೆಂಬಲಿತ ಸೇನೆ ನಗರವನ್ನು ತ್ಯಜಿಸಲು ನಿರ್ಧರಿಸಿದೆ.

‘ಬಂಡುಕೋರರ ಪ್ರಾಬಲ್ಯ ಇರುವ ಮಿಸರತವನ್ನು ಸೇನೆ ಈಗಿರುವ ಸ್ಥಿತಿಯಲ್ಲೇ ಬುಡಕಟ್ಟು ಜನರಿಗೆ ಬಿಟ್ಟುಕೊಡಲು ನಿರ್ಧರಿಸಿದೆ. ವಿವಾದವನ್ನು ಸಂಧಾನ ಅಥವಾ ಸೇನಾ ಕಾರ್ಯಾಚರಣೆ ಮೂಲಕ ಇತ್ಯರ್ಥಪಡಿಸಲು ತೀರ್ಮಾನಿಸಲಾಗಿದೆ’ ಎಂದು ವಿದೇಶಾಂಗ ಉಪ ಸಚಿವ ಖಾಲಿದ್ ಕಯೀಮ್ ತಿಳಿಸಿದ್ದಾರೆ.
 
ಏತನ್ಮಧ್ಯೆ, ಗಡಾಫಿ ಪರ ಸೇನೆಯ ಬದಲಾದ ನಿಲುವಿನ ಬೆನ್ನಲ್ಲೇ ನ್ಯಾಟೊ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಗಡಾಫಿ ಅವರ ಮನೆ ಆವರಣದಲ್ಲಿ ಸಂಭವಿಸಿದ ಈ ಸ್ಫೋಟ ಮತ್ತು ಸಾವನ್ನು ಸರ್ಕಾರಿ ವಕ್ತಾರ ಮೂಸಾ ಇಬ್ರಾಹಿಂ ದೃಢಪಡಿಸಿದ್ದಾರೆ.

ಪತ್ರಕರ್ತೆ ಸೆರೆ: ವರದಿಗಾರಿಕೆಗೆ ತೆರಳಿದ್ದ ಅಮೇರಿಕದ ಪತ್ರಕರ್ತೆ ಕ್ಲಾರಾ ಗಿಲಿ ಅವರನ್ನು ಸೇನೆ ಬಂಧಿಸಿದೆ. ಹದಿನೈದು ದಿನಗಳಿಂದ ಅವರು ಕಾಣೆಯಾಗಿದ್ದರು. ಶನಿವಾರ ಮನೆಯವರಿಗೆ ದೂರವಾಣಿ ಕರೆ ಮಾಡಿರುವ ಗಿಲಿ, ಮಹಿಳಾ ಜೈಲಿನಲ್ಲಿ ತಮ್ಮನ್ನು ಬಂಧಿಸಿಟ್ಟಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.