ADVERTISEMENT

ವಿಕಿರಣ ಪ್ರಮಾಣ ಇಳಿಕೆ ರಿಯಾಕ್ಟರ್ ಶಾಖ ಹತೋಟಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಟೋಕಿಯೊ (ಪಿಟಿಐ): ಪ್ರಳಯಾಂತಕ ಸುನಾಮಿಯಿಂದ ಧ್ವಂಸಗೊಂಡು ವಿಕಿರಣ ಹರಡುತ್ತಿರುವ ಫುಕುಶಿಮಾ ಅಣುಸ್ಥಾವರದ ರಿಯಾಕ್ಟರುಗಳನ್ನು ತಂಪುಗೊಳಿಸುವ ಜಪಾನಿನ ಎಂಜಿನಿಯರುಗಳ ಹರಸಾಹಸ ಶನಿವಾರ ಸ್ವಲ್ವಮಟ್ಟಿಗೆ ಯಶಸ್ವಿಯಾಗಿದೆ. ಹೆಚ್ಚಿನ ಭೀತಿ ಮೂಡಿಸಿರುವ ಮೂರನೇ ಮತ್ತು ನಾಲ್ಕನೇ ರಿಯಾಕ್ಟರುಗಳ ಇಂಧನ ಸರಳುಗಳನ್ನು ಆದಷ್ಟು ಶೀಘ್ರ ತಂಪುಗೊಳಿಸುವ ಸಲುವಾಗಿ ಮಾನವ ರಹಿತ ವಾಹನದ ನೆರವಿನಿಂದ ಅಪಾರ ಪ್ರಮಾಣದ ನೀರನ್ನು ಸುರಿಯಲಾಯಿತು.

ಎರಡನೇ ರಿಯಾಕ್ಟರಿನಿಂದ ಈಶಾನ್ಯ ದಿಕ್ಕಿಗೆ ಅರ್ಧ ಕಿ.ಮೀ. ದೂರದಲ್ಲಿ ಶನಿವಾರ ಪ್ರತಿ ಗಂಟೆಗೆ 2579 ಮೈಕ್ರೋಸೀವರ್ಟ್ ವಿಕಿರಣ ಕಂಡುಬಂದಿದ್ದು, ಇದು ಶುಕ್ರವಾರದ 3443 ಮೈಕ್ರೋಸೀವರ್ಟ್‌ಗಳಿಗೆ ಹೋಲಿಸಿದರೆ ಇಳಿಮುಖವಾಗಿದೆ. ಈ ಮುನ್ನ ಶುಕ್ರವಾರ ಮಧ್ಯರಾತ್ರಿಯವರೆಗೆ ಸತತ 13 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದ ಟೋಕಿಯೊ ಅಗ್ನಿಶಾಮಕ ಪಡೆ ಸಿಬ್ಬಂದಿ ಮೂರನೇ ರಿಯಾಕ್ಟರಿಗೆ ಸುಮಾರು 2000 ಟನ್ ನೀರು ಸುರಿದಿದ್ದವು.

ಈ ಮಧ್ಯೆ ಸ್ಥಾವರದ ರಿಯಾಕ್ಟರುಗಳಿಗೆ ವಿದ್ಯುತ್ ಮರುಸಂಪರ್ಕ ಕಲ್ಪಿಸಲು ಯತ್ನ ಮುಂದುವರಿದಿದ್ದರೂ ತಂಪುಗೊಳಿಸುವ ವ್ಯವಸ್ಥೆ ತಕ್ಷಣವೇ ಸರಿಯಾಗಿ ಕೆಲಸ ಮಾಡುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಟೋಕಿಯೊ ಇಲೆಕ್ಟ್ರಿಕ್ ಪವರ್ ಕಂಪೆನಿ (ಟೆಪ್ಕೊ) ಸಂದೇಹ ವ್ಯಕ್ತಪಡಿಸಿದೆ. ಆದರೆ ಈ ರಿಯಾಕ್ಟರುಗಳಲ್ಲಿ ಅಳವಡಿಸಿರುವ ಪ್ಲುಟೋನಿಯಂ- ಯುರೇನಿಯಂ ಆಕ್ಸೈಡ್ ಇಂಧನದ ಸರಳಿನ ತಾಪಮಾನ ನಿಯಂತ್ರಿಸುವುದು ಯುರೇನಿಯಂ ಇಂಧನ ಸರಳನ್ನು ಹತೋಟಿಗೆ ತೆಗೆದುಕೊಳ್ಳುವುದಕ್ಕಿಂತ ಹೆಚ್ಚು ಸವಾಲಿನ ಸಂಗತಿ ಎನ್ನಲಾಗಿದೆ.
 
ಒಂದೆಡೆ ತಾಪಮಾನ ನಿಯಂತ್ರಿಸುವ ಯತ್ನ ನಡೆದಿರುವಾಗಲೇ, ಮತ್ತೊಂದೆಡೆ  ಮೂರನೇ ರಿಯಾಕ್ಟರಿನ ಲೋಹದ ಹೊದಿಕೆಯೊಳಗಿನ ಒತ್ತಡ ಹೆಚ್ಚುತ್ತಿದೆ ಎಂದು ಜಪಾನಿನ ಪರಮಾಣು ಮತ್ತು ಕೈಗಾರಿಕಾ ಸುರಕ್ಷಾ ಏಜೆನ್ಸಿ ಹೇಳಿರುವುದು ಆತಂಕ ಮೂಡಿಸಿದೆ. ದುರಂತದಿಂದ ಸಾವಿಗೀಡಾದವರ ಹಾಗೂ ನಾಪತ್ತೆಯಾದವರ ಸಂಖ್ಯೆ ಹೆಚ್ಚುತ್ತಿದ್ದು, ಇದು 20,000 ದಾಟಿದೆ ಎಂದು ರಾಷ್ಟ್ರೀಯ ಪೊಲೀಸ್ ಏಜೆನ್ಸಿ ಹೇಳಿದೆ. ಈ ಪೈಕಿ 8133 ಜನ ಸಾವಿಗೀಡಾದವರು ದೃಢಪಟ್ಟಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ.

ಅವಶೇಷಗಳಡಿ ಇಬ್ಬರು !
ಟೋಕಿಯೊ (ಡಿಪಿಎ): ಈಶಾನ್ಯ ಜಪಾನ್‌ನಲ್ಲಿ ಉಂಟಾದ ಭಾರಿ ಭೂಕಂಪ ಮತ್ತು ಸುನಾಮಿಯಿಂದಾಗಿ ಆದ ಅನಾಹುತಗಳ ಅವಶೇಷಗಳಡಿ  ಸಿಲುಕಿದ್ದ 80 ವರ್ಷದ ಮಹಿಳೆ ಮತ್ತು 16 ವರ್ಷದ ಯುವಕ ಪತ್ತೆಯಾಗಿದ್ದಾರೆಂದು ಜಪಾನ್ ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ಮಿಯಾಗಿ ಪ್ರಾಂತ್ಯದ ಇಶಿನೊಮಕಿಯಲ್ಲಿ ಪೊಲೀಸರ ಕರೆಗೆ ಉತ್ತರಿಸಿದರು ಎಂದು ಪೊಲೀಸರನ್ನು  ಉದಹರಿಸಿ ಸಾರ್ವಜನಿಕ ಪ್ರಸಾರಾಧಿಕಾರಿ ಎನ್‌ಎಚ್‌ಕೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.