ಪೆಶಾವರ (ಪಿಟಿಐ): ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ಚರಸಡ್ಡಾದಲ್ಲಿರುವ ಬಚಾಖಾನ್ ವಿಶ್ವವಿದ್ಯಾಲಯದ ಮೇಲೆ ತಾಲಿಬಾನ್ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ ವಿದ್ಯಾರ್ಥಿಗಳು ಸೇರಿ 25 ಜನ ಮೃತಪಟ್ಟಿದ್ದಾರೆ.
ಈ ಭೀಕರ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಪೆಶಾವರದ ಸೇನಾ ಶಾಲೆಯ ಮೇಲೆ 2014ರ ಡಿಸೆಂಬರ್‌ನಲ್ಲಿ ನಡೆದ ಕ್ರೂರ ದಾಳಿಯ ಕಹಿ ನೆನಪು ಮಾಸುವ ಮುನ್ನವೇ ತಾಲಿಬಾನ್ ಸಂಘಟನೆ ಶಿಕ್ಷಣ ಸಂಸ್ಥೆಯ ಮೇಲೆ ಮತ್ತೊಮ್ಮೆ ದಾಳಿ ನಡೆಸಿದೆ. ಆಗ 150 ಜನ ಸತ್ತಿದ್ದರು.
ಚರಸಡ್ಡಾದಲ್ಲಿರುವ ಬಚಾಖಾನ್ ವಿವಿಯನ್ನು ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫಾರ್ ಖಾನ್ ಹೆಸರಿನಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದ್ದು ಇದು ಪೆಶಾವರದಿಂದ 50 ಕಿ.ಮೀ. ನೈರುತ್ಯಕ್ಕಿದೆ.
ದಾಳಿ ನಡೆದಾಗ ಗಫರ್ ಖಾನ್ ಸ್ಮರಣಾರ್ಥ ವಿ.ವಿಯಲ್ಲಿ ಕಾವ್ಯ ಕಮ್ಮಟವೊಂದು ನಡೆಯುತ್ತಿತ್ತು. ಆಗ ವಿವಿ ಆವರಣದಲ್ಲಿ 3000 ವಿದ್ಯಾರ್ಥಿಗಳು ಮತ್ತು 600 ಅತಿಥಿಗಳು ಇದ್ದರು.
ಘಟನೆ ವಿವರ: ವಿಶ್ವವಿದ್ಯಾಲಯ ಪ್ರವೇಶಿಸಿದ ಉಗ್ರರು ತರಗತಿಗಳಲ್ಲಿದ್ದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಿದ್ದಾರೆ.
ಸೇನೆಯ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆಯ ವಕ್ತಾರ ಲೆ. ಜ. ಆಸಿಮ್ ಸಲೀಂ ಬಾಜ್ವಾ ಟ್ವೀಟ್ ಮಾಡಿದ್ದಾರೆ.
ವಿ.ವಿಯೊಳಗೆ ಪ್ರವೇಶಿಸಿರುವ ಎಲ್ಲ ಉಗ್ರರನ್ನು ಹತ್ಯೆ ಮಾಡಲಾಗಿದ್ದು ಕಾರ್ಯಾಚರಣೆ ಕೊನೆಗೊಂಡಿದೆ
ಎಂದು ಸೇನೆ ತಿಳಿಸಿದೆ.
ಹೊಣೆ ಹೊತ್ತ ಉಗ್ರರು: ತೆಹ್ರೀಕ್–ಎ–ತಾಲಿಬಾನ್ ಪಾಕಿಸ್ತಾನ್ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ದಾಳಿಗೆ ನಾಲ್ವರು ಉಗ್ರರನ್ನು ನಿಯೋಜಿಸಲಾಗಿತ್ತು ಎಂದು ಈ ಸಂಘಟನೆ ಹೇಳಿಕೊಂಡಿದೆ.
ಪೆಶಾವರ ಸೇನಾ ಶಾಲೆಯ ಮೇಲಿನ ದಾಳಿಯ ನಂತರ ಭದ್ರತಾ ಪಡೆಗಳಿಂದ ಆಗಿರುವ ಸಂಘಟನೆಯ ಕಾರ್ಯಕರ್ತರ ಹತ್ಯೆಗೆ ಇದು ಪ್ರತೀಕಾರ ಎಂದು ತೆಹ್ರಿಕ್ ಸಂಘಟನೆಯ ವಕ್ತಾರರು ಹೇಳಿಕೊಂಡಿದ್ದು, ಮುಂದೆಯೂ ದಾಳಿ ನಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಹೋರಾಡಿ ಮಡಿದ ಉಪನ್ಯಾಸಕ
ಯುವ ಉಪನ್ಯಾಸಕರೊಬ್ಬರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಬಲಿಯಾಗುವ ಮುನ್ನ ರಸಾಯನ ವಿಜ್ಞಾನದ ಪ್ರಾಧ್ಯಾಪಕ ಸೈಯದ್ ಹಮೀದ್ ಹುಸೇನ್ (35) ಅವರು ತಮ್ಮ ಪಿಸ್ತೂಲಿನಿಂದ ಉಗ್ರರತ್ತ ಗುಂಡು ಹಾರಿಸಿದ್ದರು ಎಂದು ಅವರ ವಿದ್ಯಾರ್ಥಿಗಳು ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು ರಕ್ಷಿಸಲು ಮುಂದಾದ ಪ್ರೊಫೆಸರ್ ಉಗ್ರರ ಗುಂಡಿಗೆ ಬಲಿಯಾಗಿ ಹುತಾತ್ಮರಾಗಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಟ್ವೀಟ್ ಮಾಡಿದ್ದಾರೆ.
ಘೋಷಣೆ ಕೂಗುತ್ತಾ, ಗುಂಡು ಹಾರಿಸುತ್ತಾ ಉಗ್ರರು ನಮ್ಮ ವಿಭಾಗದ ಕಟ್ಟಡದತ್ತ ನುಗ್ಗುತ್ತಿದ್ದರು. ಆಗ ತರಗತಿಯಿಂದ ಹೊರಹೋದ ಪ್ರೊಫೆಸರ್ ತಮ್ಮ ಪಿಸ್ತೂಲಿನಿಂದ ಉಗ್ರರತ್ತ ಗುಂಡು ಹಾರಿಸಿದರು. ಅದಕ್ಕೂ ಮುನ್ನ ಕಟ್ಟಡದಿಂದ ಹೋರಹೋಗದಂತೆ ನಮಗೆಲ್ಲರಿಗೂ ಎಚ್ಚರಿಕೆ ನೀಡಿದ್ದರು ಎಂದು ದಾಳಿಯಲ್ಲಿ ಬದುಕುಳಿದಿರುವ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.