ADVERTISEMENT

ವಿಶ್ವದಲ್ಲೇ ಹೆಚ್ಚು ಸಂಬಳ ಪಡೆಯುವ ಸಿಂಗಪುರ ಸಚಿವರ ವೇತನಕ್ಕೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಸಿಂಗಪುರ, (ಪಿಟಿಐ): ಸಿಂಗಪುರದ ಸಚಿವರಿಗೆ ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಹೆಗ್ಗಳಿಕೆ ಇದೆ. ಆದರೆ ಅವರ ವೇತನಕ್ಕೆ ಶೀಘ್ರವೇ ಕತ್ತರಿ ಬೀಳಲಿದ್ದು, ಸಂಬಳದಲ್ಲಿ ಮೂರನೇ ಒಂದರಷ್ಟು ಕಡಿತವಾಗಲಿದೆ. ಇಷ್ಟಾದರೂ ಸಹ ಅವರು ವಿಶ್ವದಲ್ಲಿಯೇ ಹೆಚ್ಚು ಸಂಬಳ ಪಡೆಯುವ ಸಚಿವರಾಗುತ್ತಾರೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ನಿರ್ಧಾರ ಕೈಗೊಂಡಿದ್ದು, ಸಂಬಳ ಕಡಿತವು 2011ರ ಮೇ 21ರಿಂದ ಪೂರ್ವಾನ್ವಯವಾಗಲಿದೆ.

ಹೊಸ ಪ್ರಧಾನಿ ಲೀ ಸಿನ್ ಲೂಂಗ್ ಅವರು ಕಳೆದ 2011ರಲ್ಲಿ ನಡೆದ ಚುನಾವಣೆ ವೇಳೆ ಮತದಾರರಿಗೆ ನೀಡಿದ್ದ ಆಶ್ವಾಸನೆಯನ್ನು ಈಗ ಈಡೇರಿಸಿದ್ದಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಸಿಂಗಪುರದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಆದಾಯದ ಅಂತರ ಹೆಚ್ಚಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗ 1.69 ದಶಲಕ್ಷ ಡಾಲರ್ ಸಂಬಳ ಪಡೆಯುತ್ತಿರುವ ಪ್ರಧಾನಿಗಳ ಸಂಬಳದಲ್ಲೂ ಶೇ 36 ರಷ್ಟು ಕಡಿತವಾಗಲಿದೆ. ಇದರಿಂದ ಪ್ರಧಾನಿ ಮತ್ತು ಸಚಿವರ ಸಂಬಳದಲ್ಲಿ ತೀರಾ ಕಡಿತವಾಗಲಿದ್ದು, ಸರ್ಕಾರವೇ ನೇಮಿಸಿದ ತಂಡ ಇದರ ನಿಗಾ ವಹಿಸಲಿದೆ.

ಆದರೆ ಈ ಕಡಿತದ ಹೊರತಾಗಿಯೂ ಈ ಸಚಿವರು ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯಲಿದ್ದಾರೆ. ವರ್ಷಕ್ಕೆ 4 ಲಕ್ಷ ಡಾಲರ್ ಸಂಬಳ ಪಡೆಯುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರಿಗಿಂತಲೂ ಸಿಂಗಪುರ ಸಚಿವರ ಸಂಬಳ ನಾಲ್ಕು ಪಟ್ಟು ಹೆಚ್ಚಾಗಿದೆ.

ಸಂಬಳ ಪರಾಮರ್ಶೆ ಸಮಿತಿಯ ಮುಖ್ಯಸ್ಥ ಗೆರಾರ್ಡ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಬಳ ಕಡಿತದ ವಿವರಗಳನ್ನು ಪ್ರಕಟಿಸಿದರು.ಅಧ್ಯಕ್ಷರ ವಾರ್ಷಿಕ ಸಂಬಳದಲ್ಲಿ ಶೇ 51ರಷ್ಟು ಕಡಿತವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.