ವಾಷಿಂಗ್ಟನ್ (ಪಿಟಿಐ): ಅಮೆರಿಕದ ಬೇಹುಗಾರಿಕೆ ರಹಸ್ಯಗಳನ್ನು ಬಯಲಿಗೆಳೆದ ಆರೋಪ ಎದುರಿಸುತ್ತಿರುವ ಎಡ್ವರ್ಡ್ ಸ್ನೋಡೆನ್ ಅವರನ್ನು ತನಗೆ ಒಪ್ಪಿಸುವಂತೆ ಅಮೆರಿಕ ರಷ್ಯಾವನ್ನು ಆಗ್ರಹಿಸಿದೆ.
ಪ್ರಸ್ತುತ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಎರಡು ವಾರಗಳಿಂದಲೂ ಇರುವ ಸ್ನೋಡೆನ್, ತಾವು ರಷ್ಯಾದಲ್ಲಿ ಆಶ್ರಯ ಪಡೆಯಲು ಮನವಿ ಮಾಡುವುದಾಗಿ ತಿಳಿಸಿದ್ದರು.
`ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿದ ಆರೋಪ ಎದುರಿಸುತ್ತಿರುವ ಸ್ನೋಡೆನ್, ಅಮೆರಿಕಕ್ಕೆ ವಾಪಸು ಬರಲೇಬೇಕು. ರಷ್ಯಾ ಸೇರಿದಂತೆ ಹಲವು ದೇಶಗಳಿಗೆ ಈ ಕುರಿತು ನಾವು ಸಂದೇಶ ರವಾನಿಸಿದ್ದೇವೆ' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೇ ಕಾರ್ನೆ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ಸ್ನೋಡೆನ್‌ಗೆ ಆಶ್ರಯ ನೀಡುವುದು ರಷ್ಯಾ ಸರ್ಕಾರಕ್ಕೆ ಪ್ರತಿಕೂಲ ಪರಿಣಾಮ ತಂದೊಡ್ಡಬಹುದು. ತನ್ನದೇ ವಿಮಾನ ನಿಲ್ದಾಣದಲ್ಲಿ ಸ್ನೋಡೆನ್ ಆಶ್ರಯ ಪಡೆದಿದ್ದರೂ ಅವರ ಮೇಲೆ ರಷ್ಯಾ ನಿಯಂತ್ರಣ ಹೊಂದಿಲ್ಲ' ಎಂದು ಅವರು ಹೇಳಿದರು.
`ರಷ್ಯಾದ ಜತೆಗೆ ಹೊಂದಿರುವ ಬಾಂಧವ್ಯಕ್ಕೆ ಈ ಪ್ರಕರಣ ತೊಂದರೆ ಉಂಟು ಮಾಡಬಾರದು ಎಂಬ ಅಮೆರಿಕದ ನಿಲುವಿಗೆ ಯಾವಾಗಲೂ ಬದ್ಧ' ಎಂದು ತಿಳಿಸಿದ ಜೇ ಕಾರ್ನೆ, ಸ್ನೋಡೆನ್‌ನನ್ನು ತನ್ನ ದೇಶದಿಂದ ಹೊರಹಾಕಲು ಹಾಗೂ ಅಮೆರಿಕಕ್ಕೆ ಕಳಿಸಲು ರಷ್ಯಾ ಜತೆ ಚರ್ಚೆ ನಡೆಸುವುದಾಗಿ ಹೇಳಿದರು.
`ಸ್ನೋಡೆನ್ ಗಂಭೀರ ಅಪರಾಧ ಎಸಗಿದ್ದು, ಈ ಹಿನ್ನೆಲೆಯಲ್ಲಿ ಅವರು ಅಮೆರಿಕಕ್ಕೆ ವಾಪಸಾಗಬೇಕು. ಅಮೆರಿಕ ಸಂವಿಧಾನದ ಅನುಸಾರ ನಡೆಯುವ ನ್ಯಾಯಾಂಗ ವಿಚಾರಣೆ ಪ್ರಕ್ರಿಯೆಗೆ ಅವರು ಒಳಪಡಲೇಬೇಕು' ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.