ADVERTISEMENT

ಮೂರು ವರ್ಷಗಳಲ್ಲಿ ವಿಶ್ವದಾದ್ಯಂತ 16.5 ಕೋಟಿ ಜನ ಬಡತನಕ್ಕೆ: ವಿಶ್ವಸಂಸ್ಥೆ

ಕೋವಿಡ್‌, ಉಕ್ರೇನ್‌–ರಷ್ಯಾ ಯುದ್ಧದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 14:02 IST
Last Updated 14 ಜುಲೈ 2023, 14:02 IST
.
.   

ವಿಶ್ವಸಂಸ್ಥೆ: ಕೊರೊನಾ ಸಾಂಕ್ರಾಮಿಕದಿಂದ ಉಂಟಾದ ಹಣದುಬ್ಬರ, ಉಕ್ರೇನ್‌–ರಷ್ಯಾ ಯುದ್ಧದಿಂದಾಗಿ ಕಳೆದ ಮೂರು ವರ್ಷಗಳಲ್ಲಿ 16.5 ಕೋಟಿ ಜನರು ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಗುರುವಾರ ತಿಳಿಸಿದೆ. ಹಾಗೆಯೇ ಅಭಿವೃದ್ಧಿಶೀಲ ದೇಶಗಳು ಸಾಲದ ಮರುಪಾವತಿಗೆ ಸ್ವಲ್ಪ ಕಾಲ ವಿರಾಮ ನೀಡಬೇಕು ಮತ್ತು ಆ ಹಣವನ್ನು ಆರ್ಥಿಕ ಸಾಮಾಜಿಕ ಖರ್ಚುವೆಚ್ಚಕ್ಕೆ ವಿನಿಯೋಗ ಮಾಡಬೇಕು ಎಂದು ಸಲಹೆ ನೀಡಿದೆ.

7.5 ಕೋಟಿ ಜನರು ತೀವ್ರತರದ ಬಡತನ ಅನುಭವಿಸುತ್ತಿದ್ದಾರೆ. 2020ರಿಂದ 2023ರ ವರೆಗಿನ ಅವಧಿಯಲ್ಲಿ ದಿನಕ್ಕೆ ₹178.68ಕ್ಕಿಂತ (2.15 ಡಾಲರ್) ಕಡಿಮೆ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. 9 ಕೋಟಿ ಜನರು ದಿನಕ್ಕೆ ₹299.5ರಲ್ಲಿ (3.65 ಡಾಲರ್‌) ಜೀವನ ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವವರ ಪ್ರಸಕ್ತ ವರ್ಷದ ಆದಾಯ ಸಾಂಕ್ರಾಮಿಕಕ್ಕೂ ಮೊದಲಿದ್ದ ಆದಾಯಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದೆ.

ADVERTISEMENT

‘ಬಡತನ ಹೋಗಲಾಡಿಸಲು ಹಲವು ದೇಶಗಳು ಕೈಗೊಂಡಿರುವ ಸುರಕ್ಷತಾ ಕ್ರಮಗಳು ಅನೇಕರು ಬಡತನದ ಕೂಪಕ್ಕೆ ಬೀಳುವುದನ್ನು ತಗ್ಗಿಸಿದೆ’ ಎಂದು ಯುಎನ್‌ಡಿಪಿ ಮುಖ್ಯಸ್ಥ ಅಚಿಮ್‌ ಸ್ಟೈನರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಅತಿ ಹೆಚ್ಚು ಸಾಲ ಪಡೆದ ದೇಶಗಳಲ್ಲಿ ಅವುಗಳು ಪಡೆದ ಸಾಲಕ್ಕೂ, ಅಸಮರ್ಪಕ ಸಾಮಾಜಿಕ ವೆಚ್ಚಕ್ಕೂ ಪರಸ್ಪರ ಸಂಬಂಧವಿದೆ. ಬಡತನ ದರವು ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.  

ಜಗತ್ತಿನ ಸುಮಾರು 330 ಕೋಟಿ ಜನರು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಮಾಡುವ ವೆಚ್ಚಕ್ಕಿಂತ ಹೆಚ್ಚಾಗಿ ಸಾಲಕ್ಕೆ ಬಡ್ಡಿ ಪಾವತಿಸುತ್ತಾರೆ ಎಂದು ವಿಶ್ವಸಂಸ್ಥೆಯ ಇನ್ನೊಂದು ವರದಿ ತಿಳಿಸಿದೆ. 16.5 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲು ವಾರ್ಷಿಕ ₹1.15 ಲಕ್ಷ ಕೋಟಿ ಬೇಕಾಗಬಹುದು ಎಂದು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.